ಕ್ಯಾನ್ಸರ್ ತಡೆಗೆ ಸಹಕಾರ ಅಗತ್ಯ ; ಡಾ.ಅರವಿಂದ ಮೋಹನ್‌ದಾಸ್ ಮನವಿ

04TMK_cancer_Jagruti
Published on

ತುಮಕೂರು: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ‘ನಾನು ಮತ್ತು ನನ್ನಿಂದ ಸಾಧ್ಯ’ ಎಂಬ ಘೋಷವಾಕ್ಯದಲ್ಲಿ ಹಮ್ಮಿಕೊಂಡಿರುವ ಕ್ಯಾನ್ಸರ್ ತಡೆಗಟ್ಟುವ ಜಾಗೃತಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಅರವಿಂದ ಮೋಹನ್‌ದಾಸ್ ಮನವಿ ಮಾಡಿದರು.

ಜಿಲ್ಲಾಡಳಿತದಿಂದ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿ, ನಾಗರಿಕರು ಸಹಕಾರ ನೀಡಿದರೆ ಈ ಮಾರಕ ಖಾಯಿಲೆಯಿಂದ ಸಾಕಷ್ಟು ಜನರನ್ನು ಬದುಕಿಸಬಹುದು ಎಂದರು. ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಬಹುತೇಕ ಕ್ಯಾನ್ಸರ್ ರೋಗ ಬರುತ್ತದೆ, ಹಾಗಾಗಿ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆಚ್ಚಾಗಬೇಕು ಸಲಹೆ ನೀಡಿದರು.

ಕ್ಯಾನ್ಸರ್ ಒಂದು ಮಾರಕ ಕಾಯಿಲೆ ಎಂಬ ಭಯ ಮೊದಲು ಬಿಡಬೇಕು. ಆರಂಭದಲ್ಲೇ ಕ್ಯಾನ್ಸರ್ ಪತ್ತೆಯಾದರೆ ಆಧುನಿಕ ಚಿಕಿತ್ಸಾ ಪದ್ಧತಿಗಳಿಂದ ಗುಣಪಡಿಸಲು ಸಾಧ್ಯವಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಆರ್‌ಸಿಎಚ್ ಅಧಿಕಾರಿ ಡಾ.ಕೇಶವ್‌ರಾಜ್, ಡಾ.ನಾಗರಾಜ್ ಪಾಟೀಲ್ ಸೇರಿ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು. ಜಿಲ್ಲಾಸ್ಪತ್ರೆಯಿಂದ ಆರಂಭವಾದ ಜಾಥಾ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಡಿಎಚ್‌ಒ ಕಚೇರಿ ಬಳಿ ಸಮಾವೇಶಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net