

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದ ಕ್ಯಾನ್ಸರ್ ರೋಗಗಳು ಹೆಚ್ಚಾಗುತ್ತಿವೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.
ನಗರದ ಗಾಂಧಿಭವನದಲ್ಲಿ ಟರ್ನಿಂಗ್ ಬ್ರೈಟ್ ಟ್ರೈನಿಂಗ್ ಸೆಂಟರ್ ಮತ್ತು ಕೌಸಲ್ಯ ಅಲಯನ್ಸ್ ಸಂಸ್ಥೆ ಸಹಕಾರದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಕೂದಲು ಮತ್ತು ಉಗುರುಗಳಿಗೆ ಕ್ಯಾನ್ಸರ್ ಬರಲ್ಲ. ಆದರೆ ಉಳಿದ ಜೀವಕೋಶದಲ್ಲಿ ರೋಗ ಕಾಣಿಸಿಕೊಳ್ಳಬಹುದು. ಇದು ಸಹಜವಾಗಿ ತಕ್ಷಣವೇ ಕಾಣಿಸಿಕೊಳ್ಳುವುದಿಲ್ಲ. ವೈದ್ಯರ ಮೂಲಕ ಪತ್ತೆಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಕಾಲಮಾನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಒಳಗಾಗುತ್ತಿದ್ದಾರೆ. ಮುಖ್ಯವಾಗಿ ಸ್ತನ, ಗರ್ಭಾಶಯ, ಗರ್ಭಕಂಠ ಕ್ಯಾನ್ಸರ್. ಇವು ಮೊದಲ ಹಂತದಲ್ಲಿಯೇ ಪತ್ತೆಯಾದರೆ ಔಷಧದಿಂದ ಗುಣಪಡಿಸಬಹುದು. ಎರಡು ಮೂರು ದಶಕದ ಹಿಂದೆ ಮನುಷ್ಯನಿಗೆ ಕ್ಯಾನ್ಸರ್ ಬಂದರೆ ಸಾವೇ ಗಟ್ಟಿ ಎನ್ನುವ ಕಾಲವಿತ್ತು. ಆದರೀಗ ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಆರೋಗ್ಯ ಕ್ಷೇತ್ರದ ವಿಜ್ಞಾನಿಗಳು ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದಾದ ಔಷಧ ಪತ್ತೆ ಮಾಡಿದ್ದಾರೆ. ಇನ್ನು 10 ವರ್ಷದಲ್ಲಿ ಮತ್ತಷ್ಟು ಪರಿಣಾಮಕಾರಿ ಔಷಧಗಳು ಲಭ್ಯವಾಗುತ್ತವೆ ಎಂದರು.
ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎಂ ಶ್ವೇತಾ, ಉತ್ತಮ ಆಹಾರ ಮತ್ತು ದುಡಿಮೆ, ಯೋಗಾಸನ, ಒತ್ತಡವಿಲ್ಲದ ಜೀವನಶೈಲಿಯಿಂದ ಆರೋಗ್ಯವನು ರಕ್ಷಿಸಿಕೊಳ್ಳಬಹುದು ಎಂದು ಕಿವಿಮಾತೇಳಿದರು.
ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಟಿ.ಎನ್.ರಕ್ಷಿತ್‌ರಾಜ್, ಕೆ.ವಿ.ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲೆ ಡಾ.ವಿ.ಡಿ ಸುವರ್ಣ, ಶಿಕ್ಷಣ ಇಲಾಖೆಯ ದಕ್ಷಿಣ ವಲಯ ಸಂಯೋಜನಾಧಿಕಾರಿ ರಾಧಾ, ಅಲಯನ್ಸ್ ಸಂಸ್ಥೆಯ 1ನೇ ಉಪ ಪ್ರಾಂತಪಾಲ ಎಚ್.ಎಂ.ಮಾದೇಗೌಡ, ಚಂದ್ರಶೇಖರ್ ಇತರರಿದ್ದರು. ಇದೇ ವೇಳೆ ನರ್ಸರಿ ಕೋರ್ಸ್ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.