ಕ್ಯಾನ್ಸರ್ ಬಗ್ಗೆ ಭಯ ಬೇಡ, ಜಾಗೃತರಾಗಿರಿ

cancer
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು, ಈ ಬಗ್ಗೆ ಭಯಪಡಬಾರದು ಆದರೆ ಸಾರ್ವಜನಿಕರು ಜಾಗೃತರಾಗಿಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್.ಅನುರಾಧಾ ಹೇಳಿದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿದರು. ಬದಲಾದ ಜೀವನ ಶೈಲಿ, ಮನಸ್ಥಿತಿ, ಆಹಾರ ಪದ್ಧತಿಯಿಂದ ಕ್ಯಾನ್ಸರ್‌ನಂತಹ ರೋಗಗಳು ಹರಡುತ್ತಿವೆ, ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬರುತ್ತಿದ್ದೆ, ಯುವ ಸಮೂಹ ದುಶ್ಚಟಗಳಿಗೆ ದಾಸರಾಗದೆ ಉತ್ತಮ ಜೀವನ ನಡೆಸಿ ಎಂದರು. ಪ್ರಸಕ್ತ ದಿನಗಳಲ್ಲಿ ಮಹಿಳೆಯರಲ್ಲೂ ಹೆಚ್ಚಾಗಿ ಕ್ಯಾನ್ಸರ್ ಕಂಡು ಬರುತ್ತಿದೆ. ಆರಂಭಿಕ ಹಂತದಲ್ಲಿ ಲಕ್ಷಣಗಳು ಕಂಡು ಬಂದಲ್ಲಿ ಭಯ ಪಡದೆ ಚಿಕಿತ್ಸೆ ಪಡೆಯಬೇಕು. ಮೊದಲ ಹಂತದಲ್ಲೇ ಪತ್ತೆ ಹಚ್ಚಿದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಮೂಲಕ ಪೂರ್ಣವಾಗಿ ಗುಣ ಪಡಿಸಬಹುದು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಇಲಾಖೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ತಪ್ಪು ಭಾವನೆ ಇದೆ: ಕ್ಯಾನ್ಸರ್ ಬಂದರೆ ಸಾವು ಎಂಬ ಭಾವನೆ ಅನೇಕರಲ್ಲಿದೆ. ಆ ಮನೋಭಾವ ಹೋಗಬೇಕು ಎಂದುಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಸೋನಿಯಾ ತಿಳಿಸಿದರು. ಕ್ನಾಸನರ್ ರೋಗಿಗಳು ಸಾವನ್ನು ಗೆದ್ದು ಎಲ್ಲರಂತೆ ಜೀವನ ನಡೆಸಬಹುದು. ಈ ರೋಗ ಹರಡದಂತೆ ತಡೆಯುವುದು ಅತೀ ಮುಖ್ಯಎಂದರು. ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಲಕ್ಷಣಗಳು ತಿಳಿದ ಕೂಡಲೇ ಪರೀಕ್ಷಿಸಬೇಕು. ಆದರೇ ಮಹಿಳೆಯರು ಮುಜುಗರ ಪಡುತ್ತಾ ಹಾಗೆ ಉಳಿಯುತ್ತಾರೆ. ಯಾರು ಕೂಡ ಮುಜುಗರ ಪಡದೆ ಪ್ರಥಮ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕ್ಯಾನ್ಸರ್ ಎಂದರೆ ಜನರು ಭಯ ಪಡುತ್ತಾರೆ. ಇದು ಒಂದು ಗುಣಪಡಿಸಬಹುದಾದ ಖಾಯಿಲೆ. ಸಾರ್ವಜನಿಕರು ಆಧುನಿಕ ಜೀವನಶೈಲಿ, ಧೂಮಪಾನ, ಮಧ್ಯಪಾನ ಸೇವನೆಗಳಿಂದ ದೂರವಿರಿ. ನಿಯಮಿತ ಗುಣಮಟ್ಟದ ಆಹಾರ ಸೇವನೆ, ಯೋಗಾಭ್ಯಾಸ ಜೀವನದಲ್ಲಿ ರೂಡಿಸಿಕೊಂಡಲ್ಲಿ ರೋಗಗಳು ಮನುಷ್ಯನ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net