

ಮಂಡ್ಯ: ಬದಲಾದ ಜೀವನ ಶೈಲಿ ಮತ್ತು ಆಹಾರಗಳಿಂದ ವಿವಿಧ ಕ್ಯಾನ್ಸರ್ ರೋಗಗಳು ಹೆಚ್ಚಾಗುತ್ತಿವೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಹೇಳಿದರು.
ನಗರದ ಹೊಸಹಳ್ಳಿ ವೃತ್ತದಲ್ಲಿರುವ ರುದ್ರಪ್ಪ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್‌ನಿಂದ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಅಭಿಯಾನ ಮತ್ತು ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಥೆಯ ಮುಖ್ಯಧ್ಯೇಯ ಕ್ಯಾನ್ಸರ್ ಜಾಗೃತಿ, ಆರ್ಥಿಕ ಸೇವಾಕಾರ್ಯ, ಅನಾಥ ಮತ್ತು ವೃದ್ದಾಶ್ರಮಗಳ ಸಬಲೀಕರಣಗೊಳಿಸುವ ಯೋಜನೆಗಳಾಗಿವೆ. ಕ್ಯಾನ್ಸರ್ ಮುಕ್ತ ಜೀವನ ಮಾಡುವುದೇ ಅಲಯನ್ಸ್ ಸಂಸ್ಥೆಯ ಮೊದಲ ಸೇವಾ ಕಾರ್ಯವಾಗಿದೆ. ಪೋಲಿಯೋ ಮುಕ್ತ ಪ್ರಪಂಚ, ಭಾರತವನ್ನಾಗಿಸಲು ಶ್ರಮಿಸಿದಂತೆ ಕ್ಯಾನ್ಸರ್ ಮುಕ್ತ ಭಾರತ ಮಾಡಲು ಸಂಕಲ್ಪಿಸಲಾಗಿದೆ ಎಂದರು.
ಅಲಯನ್ಸ್ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಭಾರತದಲ್ಲಿ ಕ್ಯಾನ್ಸರ್ ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಅನುವಂಶಿಕ, ಜೀವನಶೈಲಿ, ಆಹಾರ ಪದ್ಧತಿ, ಪರಿಸರ ಮತ್ತು ಆರೋಗ್ಯ ರಕ್ಷಣಾ ಅಂಶಗಳ ಸಂಕೀರ್ಣ ಪರಸ್ಪರ ಕ್ರಿಯೆಯಿಂದಾಗಿ ಕೆಲವು ವಿಧದ ಕ್ಯಾನ್ಸರ್‌ಗಳು ಹೆಚ್ಚು ಪ್ರಚಲಿತವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
2022ರಲ್ಲಿ 1.46 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಕಂಡು ಬಂದಿದೆ. ದೇಶದ 9 ಜನರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್‌ಗೆ ಒಳಗಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಸಾಮಾನ್ಯವಾಗಿ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಮೂಳೆ ಕ್ಯಾನ್ಸರ್, ಗರ್ಭ ಕ್ಯಾನ್ಸರ್ ಕಾಣಿಸಿಕೊಳ್ಳುತ್ತವೆ. ಈ ರೋಗಕ್ಕೆ ಸಮರ್ಪಕ ಪ್ರಮಾಣದ ಔಷಧಕ್ಕೆ ಸಂಶೋಧನೆ ನಡೆಯುತ್ತಿವೆ. ಕೆಲ ವರ್ಷದಲ್ಲಿ ಕ್ಯಾನ್ಸರ್‌ಗೂ ನಿಗಧಿತ ಔಷಧ ಬರುತ್ತವೆ ಎಂದು ತಿಳಿಸಿದರು.
ಅಲಯನ್ಸ್ ಸಂಸ್ಥೆ ಪ್ರಾಂತಪಾಲ ಮಾದೇಗೌಡ, ಐಸಿಸಿ ನಿರ್ದೇಶಕ ದಿವಾಕರ್, ಸಂಪುಟ ಖಜಾಂಚಿ ಮಹೇಶ್, ಶಶಿಧರ್, ನಾಗರಾಜು ಇತರರಿದ್ದರು. ಇದೇ ಸಂದರ್ಭದಲ್ಲಿ ಬೋನ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮದ್ದೂರು ತಾಲೂಕಿನ ತಗ್ಗಹಳ್ಳಿ ಗ್ರಾಮದ 13 ವರ್ಷದ ಯಾಶಿಕಾ ಚಿಕಿತ್ಸೆಗೆ 25 ಸಾವಿರ ರೂ ಚೆಕ್ ವಿತರಿಸಲಾಯಿತು.