ಚಿಕಿತ್ಸೆಗೆ ಸ್ಪಂದಿಸಿದ ತಾಲೂಕು, ಜಿಲ್ಲಾಡಳಿತ

hnl tq 17 edit
ಕ್ಯಾನ್ಸರ್‌ಪೀಡಿತ ವ್ಯಕ್ತಿಗೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಕೂಡಲೇ ಕಾರ್ಯಪ್ರವೃತ್ತರಾಗಿ ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ.
Published on

ಹೊನ್ನಾಳಿ: ಕ್ಯಾನ್ಸರ್ ಪೀಡಿತ ತಂದೆಗೆ ಔಷಧ ಕೊಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದ ಯುವತಿಯ ಸಮಸ್ಯೆಗೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಸ್ಪಂದಿಸಿದೆ.


ತಮ್ಮ ತಂದೆ ಪ್ಯಾಂಕ್ರಿಯಾಸಿಸ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಎರಡನೇ ಹಂತದ ಚಿಕಿತ್ಸೆಯನ್ನು ಮಾರ್ಚ್ 25 ರಿಂದ ಕೊಡಿಸಬೇಕಾಗಿತ್ತು. ಆದರೆ ಲಾಕ್‌ಡೌನ್‌ನಿಂದ ವೈದ್ಯರು ಔಷಧ ಬಂದಿಲ್ಲವೆಂದು ಹೇಳುತ್ತಿದ್ದಾರೆ. ತಕ್ಷಣ ಔಷಧ ಕೊಡಿಸಿ ಎಂದು ತಾಲೂಕಿನ ಮಲೇಕುಂಬಳೂರು ಗ್ರಾಮದ ನಿಖಿತಾ ಸಿಎಂಗೆ ಮನವಿ ಮಾಡಿದ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಜಿಲ್ಲಾ ಹಾಗೂ ತಾಲೂಕು ಆಡಳಿತಗಳು ಕಾರ್ಯಪ್ರವೃತ್ತರಾಗಿ ದಾವಣಗೆರೆ ಎಸ್ಸೆಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿವೆ.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ತಹಸೀಲ್ದಾರ್ ತುಷಾರ್ ಬಿ.ಹೊಸೂರು ಅವರು ಅಡಿಷನಲ್ ಡ್ರಗ್ ಕಂಟ್ರೋಲರ್ ಇವರ ಸಹಕಾರದೊಂದಿಗೆ ದಾವಣಗೆರೆ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ್ದಾರೆ. ನಿತ್ಯ ಹೋಗಿ ಅವರ ಆರೋಗ್ಯ ವಿಚಾರಿಸುವ ಹೊಣೆಯನ್ನು ಸ್ಥಳೀಯ ಸರ್ಕಾರಿ ವೈದ್ಯ ಡಾ.ಚಂದ್ರಕಾಂತ್, ಪಿಡಿಒ ಲಕ್ಷ್ಮೀಬಾಯಿ ಅವರಿಗೆ ವಹಿಸಲಾಗಿದೆ.

ವಿಜಯವಾಣಿ ಕಾಳಜಿಗೆ ಮೆಚ್ಚುಗೆ: ಕ್ಯಾನ್ಸರ್‌ಪೀಡಿತರು ಔಷಧವಿಲ್ಲದೇ ನರಳುತ್ತಿದ್ದಾರೆಂಬ ಮಾಹಿತಿಯನ್ನು ವಿಜಯವಾಣಿ ಏ.16 ರಂದು ಪ್ರಕಟಿಸಿತ್ತು. ಇದರಿಂದ ಆ ಕುಟುಂಬ ಔಷಧ ಹಾಗೂ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ. ನೊಂದವರಿಗೆ ಇನ್ನಷ್ಟು ಆಸರೆಯಾಗಿ ಎಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರು ಪತ್ರಿಕೆ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net