

ಮೈಸೂರು: ಮುಂದಿನ ದಿನಗಳಲ್ಲಿ ಆರ್‌ಟಿಸಿ ಆಧಾರದಲ್ಲಿ ಜಮೀನು ನೋಂದಣಿ ಮಾಡುವುದನ್ನು ರದ್ದು ಪಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಭೂ ಪರಿವರ್ತನೆ ಮಾಡದೆ ಬಡಾವಣೆಗಳನ್ನು ರಚಿಸಿ ನಿವೇಶನ ಮಾರಾಟ ಮಾಡುತ್ತಾರೆ. ನಂತರ, ಅದನ್ನು ಖರೀದಿಸುವವರು ಮತ್ತೊಬ್ಬರಿಗೆ ಮಾರಾಟ ಮಾಡುವಾಗ ಕಾನೂನಾತ್ಮಕ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಈ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬಡಾವಣೆಗಳನ್ನು ರಚನೆ ಮಾಡುವ ಮುಂಚೆ ಭೂ ಪರಿವರ್ತನೆ ಮಾಡಿಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ 60 ಲಕ್ಷ ಎಕರೆ ಪ್ರದೇಶವು ಭೂ ಪರಿವರ್ತನೆಯಾಗಿ ಬಡಾವಣೆ ರಚನೆಯಾದರೂ ಆರ್‌ಟಿಸಿಯಲ್ಲಿ ಬದಲಾಗಿಲ್ಲ. ಇದರಿಂದಾಗಿ ಎರಡು ರೀತಿಯ ವಹಿವಾಟು ನಡೆಯಲು ಕಾರಣವಾಗಿದೆ. ಬೆಂಗಳೂರು ನಗರದಲ್ಲಿ ಭೂ ಪರಿವರ್ತನೆ ಆಗಿರುವ ಬಗ್ಗೆ ತಹಸೀಲ್ದಾರ್ ಷರಾ ಬರೆದಿದ್ದಾರೆ. ಆದರೆ, ಆರ್‌ಟಿಸಿಯಲ್ಲಿ ನಮುದಾಗಿಲ್ಲ. ಇದು ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಆಗಿರುವುದು ಕಂಡು ಬಂದಿದೆ ಎಂದರು.
ಜಮೀನನ್ನು ಮಾರಾಟ ಮಾಡಿ ನೋಂದಣಿಯಾದ ಮೇಲೆ ಆರ್‌ಟಿಸಿಯಲ್ಲಿ ಅವರ ಹೆಸರು ಬಂದು ಕೂರಬೇಕು. ಆದರೆ ಯಥಾಸ್ಥಿತಿಯಲ್ಲಿ ಉಳಿಸುವುದರಿಂದ ಮತ್ತೆ ಅದನ್ನು ಕೃಷಿ ಭೂಮಿಯಾಗಿ ಉಳಿಸಿಕೊಂಡು ಮತ್ತೆ ಮಾರಾಟ ಮಾಡುತ್ತಾರೆ. ಕೃಷಿ ಮತ್ತು ಕೃಷಿಯೇತರ ಭೂಮಿ ನೋಂದಣಿ ಮಾಡಿದ ಕೂಡಲೇ ನಮೂದು ಮಾಡದೆ ಉಳಿಸಿಕೊಳ್ಳುವುದರಿಂದ ಸರ್ಕಾರಕ್ಕೆ ಆದಾಯ ತಪ್ಪುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಭೂ ಪರಿವರ್ತನೆಯಾಗದೆ ಬಡಾವಣೆ ರಚನೆಗಳ ನಿರ್ಮಾಣಕ್ಕೆ ತಡೆ ಹಾಕಲು ಮತ್ತು ಮಾರಾಟ ಮಾಡದಂತೆ ತಡೆಯಲು ಆರ್‌ಟಿಸಿ ಆಧಾರದ ಮೇಲೆ ಜಮೀನನ್ನು ನೋಂದಣಿ ಮಾಡದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಆದೇಶಿಸಲಾಗುವುದು ಎಂದು ತಿಳಿಸಿದರು.
ಭೂಪರಿವರ್ತನೆಯಾದ ಜಾಗದ ಪ್ರದೇಶಕ್ಕೆ ಮಾಸ್ಟರ್ ಪ್ಲಾೃನ್‌ಗೆ ಅನುಮೋದನೆ ನೀಡುವ ಮುನ್ನ ನಗರ ಮತ್ತು ಗ್ರಾಪಂ ಮಟ್ಟದಲ್ಲಿ ಪರಿಶೀಲಿಸಬೇಕು. ಆದರೆ ನಗರ ಸ್ಥಳೀಯ ಸಂಸ್ಥೆಗಳಿಂದ ಈ ಕೆಲಸವಾಗುತ್ತಿಲ್ಲ. ಒಂದು ಕಡೆ ನೋಂದಣಿ ಮಾಡುವಾಗ ಕೃಷಿಯೇತರ ಭೂಮಿ(ನಾನ್ ಅಗ್ರಿಕಲ್ಚರಲ್ ಲ್ಯಾಂಡ್) ಬೆಲೆಯನ್ನು ಕಟ್ಟುವುದಿಲ್ಲ. ಈ ಕಡೆಗೆ ಕೃಷಿ ಭೂಮಿಯ ತೆರಿಗೆಯನ್ನು ಪಾವತಿಸಿಕೊಳ್ಳುವುದಿಲ್ಲ. ಇದರಿಂದಾಗಿ ಸಾಕಷ್ಟು ನಿಮಯ ಉಲ್ಲಂಘನೆಗೆ ದಾರಿಯಾಗಿದೆ ಎಂದು ಹೇಳಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಆರ್‌ಟಿಸಿ ಆಧಾರದ ಮೇಲೆ ನೋಂದಣಿ ಮಾಡುತ್ತಿರುವುದರಿಂದ ಡಬ್ಬಲ್ ವ್ಯವಹಾರ ಮಾಡಿಕೊಳ್ಳುವುದಕ್ಕೆ ಕೆಲವರಿಗೆ ಅನುಕೂಲಕರ ಅವಕಾಶ ದೊರೆತಿದೆ. ಇದು ಕಾನೂನಾತ್ಮಕವಾಗಿ ಸರಿಯಲ್ಲ ಎನ್ನುವುದು ಗೊತ್ತಿದ್ದರೂ ಹಿಂದಿನಿಂದಲೂ ನಿರಂತರವಾಗಿ ಅದನ್ನೇ ಮುಂದುವರಿಸಿಕೊಂಡು ಬರಲಾಗಿದೆ. ಇದು ಒಂದು, ಎರಡು ವರ್ಷಗಳಿಗೆ ಪರಿಹಾರ ಕಾಣಿಸುವುದಕ್ಕೆ ಸಾಧ್ಯವಿಲ್ಲ. ಹಲವು ವರ್ಷಗಳ ಸಮಯ ಹಿಡಿದರೂ ಇದಕ್ಕೆ ಅಂತ್ಯ ಕಾಣಿಸಬೇಕಿದೆ ಎಂದು ಹೇಳಿದರು.
ತುರ್ತು ಕಾಮಗಾರಿಗಳಿಗೆ ಬಿಡುಗಡೆಯಾದ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ(ಎಸ್‌ಡಿಆರ್‌ಎಫ್) ಅನುದಾನವನ್ನು ಅನ್ಯ ಕೆಲಸಗಳಿಗೆ ಬಳಕೆ ಮಾಡಿರುವ ಕುರಿತು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಂದಾಯ ಸಚಿವರು, ಮಜಾ ಮಾಡಲು ಬಳಸುವುದಕ್ಕಿಲ್ಲ. ಉದ್ದೇಶಿತ ಕೆಲಸಕ್ಕೆ ಹಣ ಖರ್ಚು ಮಾಡಬೇಕು ಎಂದು ತಾಕೀತು ಮಾಡಿದರು.
2019ರಲ್ಲಿ ಬಿಡುಗಡೆಯಾದ ಅನುದಾನವನ್ನು 4 ವರ್ಷಗಳಿಂದ ಖರ್ಚು ಮಾಡಿಲ್ಲ. ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿಪಡಿಸಿಲ್ಲ. ಕೆಲವು ಕಾಮಗಾರಿಗಳ ಹಣವನ್ನು ಬೇರೆಯದಕ್ಕೆ ಬಳಸಲಾಗಿದೆ. ಈ ಹಣ ಮಜಾ ಮಾಡಕ್ಕೆ ಇರುವುದು ಅಂತ ಭಾವಿಸಬಾರದು. ತಕ್ಷಣವೇ ಖರ್ಚು ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ಲ್ಯಾಂಡ್ ಬೀಟ್, ಲ್ಯಾಂಡ್ ಸರ್ವೇ ಪ್ರಗತಿಯಲ್ಲಿ ಹಿಂದುಳಿದ ಕೆಲ ತಾಲೂಕುಗಳ ತಹಸೀಲ್ದಾರ್‌ಗಳನ್ನು ಸಚಿವರು ತರಾಟೆ ತೆಗೆದುಕೊಂಡರು.
ತರೀಕೆರೆ ತಾಲೂಕು ತಹಸೀಲ್ದಾರ್ ಅವರು ‘ಸರ್ವರ್ ಡೌನ್’ ಎಂಬ ವಿಚಾರ ಹೇಳುತ್ತಿದ್ದಂತೆ. ‘ಏನ್ ಹೇಳ್ತೀರಾ? ಕಥೆ ಹೇಳಬೇಡಿ. ನಾನೇನು ಹೂವು ಇಟ್ಟುಕೊಂಡು ಬಂದಿಲ್ಲ.
ಕುರ್ಚಿಗೆ ಗೌರವ ಕೊಡುವುದನ್ನು ಕಲಿಯಿರಿ. ಕೆಲಸ ಮಾಡಿ ಸ್ವಾಮಿ ಅಂತ ನಿಮ್ಮನ್ನು ಕೇಳಿಕೊಳ್ಳಬೇಕಾ?’ ಎಂದು ಗುಡುಗಿದರು.
ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ವಿಪತ್ತು ನಿರ್ವಹಣಾ ಆಯುಕ್ತೆ ವಿ.ರಶ್ಮಿ ಮಹೇಶ್, ಕೆಪಿಎಲ್‌ಸಿ ವ್ಯವಸ್ಥಾಪಕ ನಿರ್ದೇಶಕ ಕೆ.ವಸಂತಕುಮಾರ್, ಕಂದಾಯ ಇಲಾಖೆ ಆಯುಕ್ತ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತಿತರರು ಇದ್ದರು.