

ನೆಲಮಂಗಲ: ಪಟ್ಟಣ ಹಾಗೂ ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಶುಕ್ರವಾರ ಭೇಟಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಯ್ಯ ಪಡಿತರ ವಿತರಣೆ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ತಾಲೂಕಿನ ಅರಿಶಿನಕುಂಟೆ ಗ್ರಾಮದ ನ್ಯಾಯಬೆಲೆ ಅಂಗಡಿ, ಪಟ್ಟಣದ ಟಿಎಪಿಸಿಎಂಎಸ್ ಕಟ್ಟಡದಲ್ಲಿ ಪಡಿತರ ದಾಸ್ತಾನು ಮಾಡಿದ್ದ ಉಗ್ರಾಣವನ್ನೂ ಪರಿಶೀಲನೆ ನಡೆಸಿದರು.
ತಾಲೂಕಿನ ನ್ಯಾಯಬೆಲೆ ಅಂಗಡಿಗಳು ಹಾಗೂ ದಾಸ್ತಾನು ಮಾಡಿರುವ ಪಡಿತರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಜಗಜ್ಯೋತಿ ಬಸವೇಶ್ವರ, ನಿರ್ದೇಶಕ ಎ.ಪಿಳ್ಳಪ್ಪ, ನಗರಸಭೆ ಸದಸ್ಯ ಕೆ.ಎಂ.ಶಿವಕುಮಾರ್, ಆಂಜಿನಪ್ಪ ಇದ್ದರು.
ಬಡಜನರಿಗಾಗಿ ನೀಡಿರುವ ಪಡಿತರ ವಿತರಣೆ ಪರಿಶೀಲಿಸುವ ಉದ್ದೇಶದಿಂದ ನಿತ್ಯವೂ ಒಂದೊಂದು ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ಮಾಡಲಾಗುತ್ತಿದೆ. ಕರೊನಾ ವೈರಸ್ ಸೋಂಕು ಹರಡುವಿಕೆ ತಪ್ಪಿಸಲು ಲಾಕ್‌ಡೌನ್ ಮಾಡಿದ್ದು, ಪ್ರತಿಬಡ ಕುಟುಂಬಕ್ಕೆ 3 ತಿಂಗಳ (ಅಕ್ಕಿ ಮತ್ತು ಗೋದಿ) ಪಡಿತರ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಮೊದಲ ಹಂತದಲ್ಲಿ 2 ತಿಂಗಳ ಪಡಿತರ ವಿತರಣೆ ಮಾಡಲಾಗುತ್ತಿದ್ದು, ತಿಂಗಳ ಅಂತ್ಯದ ವೇಳೆ ಉಳಿದ 1 ತಿಂಗಳ ಪಡಿತರವನ್ನು ವಿತರಣೆ ಮಾಡಲಾಗುವುದು. ಸರ್ಕಾರ ಎಲ್ಲ ವಿಧದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ. ಬದಲಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಮನೆಯಿಂದ ಹೊರಗೆ ಬಾರದಂತೆ ಸಚಿವ ಕೆ.ಗೋಪಾಲಯ್ಯ ಮನವಿ ಮಾಡಿದರು.
ಲೈಸನ್ಸ್ ರದ್ದು: ಸೂಕ್ತ ರೀತಿ ಪಡಿತರ ವಿತರಣೆ ಮಾಡಿ ಮಾನವೀಯತೆ ಮೆರೆಯಬೇಕು. ಆದರೆ ತೂಕದಲ್ಲಿ ವಂಚನೆ, ಹಣವಸೂಲಿ ಬಗ್ಗೆ ದೂರು ಬಂದಲ್ಲಿ ಅಂತವರ ಲೈಸನ್ಸ್ ರದ್ದು ಮಾಡುವುದಾಗಿ ಕೆ.ಗೋಪಾಲಯ್ಯ ಎಚ್ಚರಿಕೆ ನೀಡಿದರು. ತುರ್ತುಪರಿಸ್ಥಿತಿ ಇರುವುದರಿಂದ ನಿತ್ಯ ಕನಿಷ್ಠ 200 ಮಂದಿಗೆ ಪಡಿತರ ವಿತರಣೆ ಉಳಿದ ಮಂದಿಗೆ ಮುಂಗಡ ಚೀಟಿ (ಟೋಕನ್) ನೀಡಿ ವಿತರಣೆ ಮಾಡುವಂತೆ ತಿಳಿಸಿದರು.
ಮಠಕ್ಕೆ ಭೇಟಿ: ಪಟ್ಟಣದ ಬಸವಣ್ಣ ದೇವರಮಠಕ್ಕೆ ಭೇಟಿ ಮಾಡಿದ ಸಚಿವ ಕೆ.ಗೋಪಾಲಯ್ಯ ಬಡಕೂಲಿಕಾರ್ಮಿಕರು, ನಿರಾಶ್ರಿತರು ಹಾಗೂ ಕರ್ತವ್ಯ ನಿರತ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಆಹಾರ ಪೊಟ್ಟಣ ತಯಾರಿಸುವುದನ್ನು ವೀಕ್ಷಿಸಿದರು. ಸಂಕಷ್ಟದ ಪರಿಸ್ಥಿತಿಯಲ್ಲಿ ದಾನಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರ ಸಹಕಾರ ಪಡೆದು ನಿತ್ಯ 3 ಸಾವಿರಕ್ಕೂ ಹೆಚ್ಚು ಮಂದಿಗೆ ಉಪಾಹಾರ, ಊಟ ವ್ಯವಸ್ಥೆ ಕಲ್ಪಿಸಿರುವ ಸ್ವಾಮೀಜಿ ಹಾಗೂ ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ ನೇತೃತ್ವದ ಸ್ವಯಂಸೇವಕರ ತಂಡವನ್ನು ಪ್ರಶಂಸಿದರು.
ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ, ಸದಸ್ಯ ರಮೇಶ್, ಡಿವೈಎಸ್‌ಪಿ ಬಿ.ಎಸ್.ಮೋಹನ್‌ಕುಮಾರ್, ಬಿಇಒ ಕೆ.ಸಿ.ರಮೇಶ್, ರೋಟರಿ ಮಾಜಿ ಅಧ್ಯಕ್ಷ ಎಂ.ಎನ್.ಹರೀಶ್‌ಕುಮಾರ್, ನಿರ್ದೇಶಕ ಶಿವಶಂಕರ್, ಅ.ಭಾ.ವೀ.ಮ. ಸಭಾ ಅಧ್ಯಕ್ಷ ಎನ್.ಎಸ್.ಶಾಂತಕುಮಾರ್, ಹೋಬಳಿ ಅಧ್ಯಕ್ಷ ಮುರುಳಸಿದ್ದಯ್ಯ, ಮುಖಂಡ ರಾಮಕೃಷ್ಣಪ್ಪ, ಎಚ್.ಜೆ.ಸತೀಶ್‌ಕುಮಾರ್, ಗ್ರಾ.ಪಂ.ಸದಸ್ಯ ಎಚ್.ಡಿ.ಹರ್ಷ, ಸ್ವಯಂಸೇವಕರಾದ ಬಿ.ರುದ್ರಸ್ವಾಮಿ, ಎಸ್.ಎಂ.ಮಹದೇವ್, ಎಸ್.ಗಣೇಶ್, ಶೀಲಾಶಿವಶಂಕರ್, ಜ್ಞಾನೇಶ್, ಎಸ್.ಪುನೀತ್‌ರಾಜ್, ಗಂಗಾಧರ್, ಬೈರಣ್ಣ, ಎಚ್.ಕಿರಣ್ ಮತ್ತಿತರರು ಇದ್ದರು.