ಏಜೆನ್ಸಿ ಮೂಲಕ ಶಿಕ್ಷಕರ ನಿಯೋಜನೆ ರದ್ದು: ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ

bbmp teachers
Published on

ಬೆಂಗಳೂರು: ಭದ್ರತಾ ಏಜೆನ್ಸಿ ಮೂಲಕ ಶಿಕ್ಷಕರನ್ನು ನಿಯೋಜನೆ ಮಾಡುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಆ ನಿಲುವಿನಿಂದ ಬಿಬಿಎಂಪಿ ಹಿಂದೆ ಸರಿದಿದೆ. ಮಂಗಳವಾರವೇ ಏಜೆನ್ಸಿಗೆ ನೀಡಿದ್ದ ಟೆಂಡರ್‌ ಅನ್ನು ರದ್ದುಪಡಿಸಿದೆ.

ಪಾಲಿಕೆಯು ತನ್ನ ಶಾಲಾ-ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಗುತ್ತಿಗೆ ಅಡಿಯಲ್ಲಿ ನೇಮಿಸಿಕೊಳ್ಳಲು ಕಳೆದ ಡಿಸೆಂಬರ್‌ನಲ್ಲೇ ಚಾಲನೆ ನೀಡಿತ್ತು. ಇದಕ್ಕಾಗಿ ಭದ್ರತಾ ಏಜೆನ್ಸಿಗೆ ಅನುಮತಿ ನೀಡಿದ್ದರಿಂದ ಗುಣಮಟ್ಟದ ಶಿಕ್ಷಕರನ್ನು ಆಯ್ಕೆ ಮಾಡಿ ನಿಯೋಜಿಸಲು ಯಾವ ಮಾನದಂಡ ಅನುಸರಿಸಿದೆ? ಇದಕ್ಕಾಗಿ ಏಜೆನ್ಸಿಗೆ ಇರುವ ಅರ್ಹತೆಯಾದರೂ ಏನು ಎಂಬ ಪ್ರಶ್ನೆಗಳು ಎದ್ದಿದ್ದವು. ಜತೆಗೆ ಬಿಜೆಪಿ ಶಾಸಕ ಸುರೇಶ್‌ಕುಮಾರ್ ಅವರು ಬಿಬಿಎಂಪಿ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಏಜೆನ್ಸಿಗೆ ನೀಡಿದ್ದ ಟೆಂಡರ್‌ಅನ್ನು ತಡೆಹಿಡಿಯುವಂತೆ ಪಾಲಿಕೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದರು. ಆ ಬಳಿಕ ಶಾಲಾರಂಭವಾಗುವ ಕಾರಣ ನೀಡಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಕೈಬಿಡದೆ ಮುಂದುವರಿಸುವ ರೀತಿಯಲ್ಲಿ ಏಜೆನ್ಸಿಗೆ ಸೂಚನೆ ನೀಡಲಾಗಿದ ಎಂಬುದಾಗಿ ಪಾಲಿಕೆ ಮುಖ್ಯ ಆಯುಕ್ತರು ಸೋಮವಾರವಷ್ಟೇ ತಿಳಿಸಿದ್ದರು. ಜತೆಗೆ ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ನಂತರ ಸರ್ಕಾರದೊಂದಿಗೆ ಚರ್ಚಿಸಿ ಸಚಿವಸಂಪುಟದ ಒಪ್ಪಿಗೆ ಪಡೆದು ಶಾಲೆಗಳ ಎಸ್‌ಡಿಎಂಸಿ ಮೂಲಕ ಶಿಕ್ಷಕರನ್ನು ನೇಮಿಸಿಕೊಳ್ಳುವ ಚಿಂತನೆ ಇದೆ ಎಂಬುದಾಗಿ ಮುಖ್ಯ ಆಯುಕ್ತರು ತಿಳಿಸಿದ್ದರು. ಈ ಹೇಳಿಕೆ ನೀಡಿದ ಮರುದಿನವೇ ವಲಯವಾರು ಏಜೆನ್ಸಿ ಟೆಂಡರ್‌ಅನ್ನು ರದ್ದುಪಡಿಸುವ ತೀರ್ಮಾನ ಹೊರಬಿದ್ದಿದೆ.

2024-25ನೇ ಸಾಲಿನ ಶೈಕ್ಷಣಿಕ ವರ್ಷವು ಬುಧವಾರ (ಮೇ 29) ಆರಂಭವಾಗುತ್ತಿರುವ ಕಾರಣ ಪಾಲಿಕೆಯ ಶಾಲಾ-ಕಾಲೇಜುಗಳಿಗೆ ಅವಶ್ಯವಾಗಿರುವ ಶಿಕ್ಷಕರು/ಉಪನ್ಯಾಸಕರನ್ನು ಎಸ್‌ಡಿಎಂಸಿ/ಸಿಡಿಸಿ ಮೂಲಕ ನಿಯೋಜನೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net