

ಸೋಮವಾರಪೇಟೆ: ಅ.23ರಂದು ನಡೆದ 60 ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ಬಡವರಿಗೆ ಅನ್ಯಾಯವಾಗಿದ್ದು, ಅಕ್ರಮ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹಾಗಾಗಿ ಟೆಂಡರ್ ರದ್ದುಪಡಿಸಬೇಕೆಂದು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಆಗ್ರಹಿಸಿದರು.
ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಸದಸ್ಯರು ವಾದಿಸಿದರು.
ಟೆಂಡರ್‌ದಾರರ ಹೆಸರು, ಮಳಿಗೆ ಸಂಖ್ಯೆಗಳು ಮಧ್ಯವರ್ತಿಗಳ ಕೈಸೇರಿವೆ. ಪಂಚಾಯಿತಿ ಕಚೇರಿಯಲ್ಲಿ ಗೌಪ್ಯವಾಗಿರಬೇಕಾದ ಮಾಹಿತಿ ಸೋರಿಕೆಯಾಗಿರುವ ಕಾರಣ ಮಧ್ಯವರ್ತಿಗಳು ಡೀಲ್‌ಗೆ ಇಳಿಯಲು ಕಾರಣವಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಹಿತಿ ಸೋರಿಕೆ ಮಾಡಿದ್ದಾರೆ. ಈ ಬಗ್ಗೆ ಅಧ್ಯಕ್ಷರು ವಿವರಣೆ ನೀಡಬೇಕು. ಜತೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸರ್ಕಾರಿ ನಾಮ ನಿರ್ದೇಶಿತ ಸದಸ್ಯರಾದ ಡಿ.ಯು.ಕಿರಣ್, ವಿನಯ್, ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಬಿ.ಸಂಜೀವ, ಜೀವನ್ ಆಗ್ರಹಿಸಿದರು.
ಬಡವ ಹೊಟ್ಟೆಪಾಡಿಗಾಗಿ ಹರಾಜಿನಲ್ಲಿ ಮಳಿಗೆ ಪಡೆದುಕೊಳ್ಳಲು ಬಿಡ್‌ನಲ್ಲಿ ಭಾಗವಹಿಸಿದರೆ, ಮಧ್ಯವರ್ತಿಗಳು ಬಿಡ್‌ನಲ್ಲಿ ಭಾಗವಹಿಸಿ ಮಳಿಗೆ ಅವಶ್ಯಕತೆಯಿರುವ ಬಿಡ್‌ದಾರನಿಂದ ಹಣ ಪೀಕಿರುವ ಘಟನೆಗಳೂ ನಡೆದಿವೆ. ಕೆಲ ಮಳಿಗೆಗಳು 30,000 ರೂ.ಗೆ ಬಿಡ್ ಆಗಿದ್ದರೆ, ಅದರ ಪಕ್ಕದ ಮಳಿಗೆ 4,500 ರೂಗೆ ಬಿಡ್ ಆಗಿದೆ. ಇದನ್ನು ಗಮನಿಸಿದರೆ ಮೇಲ್ನೋಟಕ್ಕೆ ಎಲ್ಲ ರೀತಿಯ ಗೋಲ್‌ಮಾಲ್‌ಗಳು ಟೆಂಡರ್‌ನಲ್ಲಿ ನಡೆದಿದೆ ಎಂದು ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ನಿಯಮದಂತೆ ಟೆಂಡರ್ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೆ. ಬಿಡ್‌ದಾರರ ಹೆಸರು ಸೋರಿಕೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಸದಸ್ಯರ ಆರೋಪವೂ ಸರಿಯಾಗಿದೆ. ಸದಸ್ಯರ ತೀರ್ಮಾನದಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಜಯಂತಿ ತಿಳಿಸಿದರು.
ಟೆಂಡರ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿವರಣೆಯೊಂದಿಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು, ಇ ಟೆಂಡರ್ ಮಾಡುವಂತೆ ಮನವಿ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸೋಮವಾರಪೇಟೆ ಪಟ್ಟಣದಲ್ಲಿ ಸಂತೆ ದಿನ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಇದರಿಂದ ಸಾರ್ವಜನಿಕರಿಗೆ ದೊಡ್ಡಮಟ್ಟದ ಕಿರಿಕಿರಿ ಆಗುತ್ತಿದೆ. ಪಟ್ಟಣದಲ್ಲಿ ಪೊಲೀಸರು ಇರುವ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ. ಟ್ರಾಫಿಕ್ ವಿಷಯದಲ್ಲಿ ಖಾಸಗಿ ಬಸ್ ಸ್ಟಾೃಂಡ್‌ನಲ್ಲಿ ರಾಜರೋಷವಾಗಿ ಹೊಡೆದಾಡಿಕೊಂಡರೂ ಕೇಳುವವರು ಇಲ್ಲದಂತಾಗಿದೆ. ಪೊಲೀಸರು ಇನ್ನಾದರೂ ಕ್ರಮಕೈಗೊಳ್ಳದಿದ್ದರೆ ಶಾಸಕರಿಗೆ ನೇರವಾಗಿ ದೂರು ನೀಡಲು ಸಭೆ ತೀರ್ಮಾನಿಸಿತು.
ಕೆಎಸ್‌ಆರ್‌ಟಿಸಿ ಮುಂಭಾಗದಲ್ಲಿ ಮಾನವೀಯತೆ ದೃಷ್ಟಿಯಿಂದ ಆಟೋ ನಿಲ್ದಾಣಕ್ಕೆ ಜಾಗ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಗೇಟ್‌ನಿಂದ ಸಿ.ಕೆ.ಸುಬ್ಬಯ್ಯ ರಸ್ತೆಗೆ ಸಂಪರ್ಕ ರಸ್ತೆಯಿದ್ದು, ಆ ರಸ್ತೆಯಲ್ಲಿ ಬೈಕ್‌ಗಳು ಸಂಚರಿಸಿದರೆ ಕೆಲ ಆಟೋ ಚಾಲಕರು ತಡೆದು ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವಿದೆ. ಅಲ್ಲದೆ ಜೇಸಿ ವೇದಿಕೆ ಮುಂಭಾಗ ಹೆಚ್ಚಿನ ಬಾಡಿಗೆ ಕೊಟ್ಟು ವಾಣಿಜ್ಯ ಮಳಿಗೆಗಳನ್ನು ಪಡೆದುಕೊಂಡಿದ್ದಾರೆ. ಮಳಿಗೆಗಳ ಮುಂದೆ ದಿನವಿಡೀ ಆಟೋಗಳನ್ನು ನಿಲ್ಲಿಸಿದರೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಆಟೋಗಳು ನಿಲ್ಲಲು ನಿಗದಿತ ಸ್ಥಳವನ್ನು ಗುರುತಿಸಿಕೊಡಬೇಕು. ಪಂಚಾಯಿತಿ ನಿಯಮವನ್ನು ಪಾಲಿಸುವಂತೆ ತಿಳಿಸಬೇಕು. ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸದಸ್ಯರು ಸೂಚಿಸಿದರು.
ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಕ್ಕೆ ಜನರು ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಆದರೆ ಪಂಚಾಯಿತಿ ಸಿಬ್ಬಂದಿಯೊಬ್ಬ ಬೇರೆಯವರ ಕೆಲಸ ಮಾಡಿಸಿಕೊಡಲು ಯಾಕೆ ಬರುತ್ತೀರ ಎಂದು ಪ್ರಶ್ನಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ನಿವೃತ್ತ ಡಿವೈಎಸ್ಪಿ ಒಬ್ಬರಿಗೆ ಸಹಾಯ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಇದು ಸದಸ್ಯರಿಗೆ ಆಗುತ್ತಿರುವ ಅವಮಾನ ಎಂದು ಮೃತ್ಯುಂಜಯ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ನನಗೆ ಅವಮಾನ ಮಾಡಿದ ಮಹಿಳಾ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು. 15 ವರ್ಷಗಳಿಂದ ನಿಯಮ ಬಾಹಿರವಾಗಿ ಈ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಶೀಘ್ರ ಆ ಮಹಿಳಾ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬಿ.ಆರ್.ಮಹೇಶ್ ಅವಿರೋಧ ಆಯ್ಕೆಯಾದರು. ಇದೀಗ ವರ್ಗಾವಣೆಗೊಂಡಿರುವ ಮುಖ್ಯಾಧಿಕಾರಿ ನಾಚಪ್ಪ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಪಿ.ಕೆ.ಚಂದ್ರ, ನಾಗರತ್ನ, ಶುಭಾಕರ್, ಎಚ್.ಎ.ನಾಗರಾಜ್ ಮುಖ್ಯಾಧಿಕಾರಿ ಸತೀಶ್ ಇದ್ದರು.