

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಶೇಕಡ 50:50 ಅನುಪಾತದಲ್ಲಿ ನೀಡಲಾಗಿರುವ ಪ್ರಕರಣಗಳ ಎಲ್ಲ ಅಕ್ರಮ ನಿವೇಶನಗಳ ಹಂಚಿಕೆ ಆದೇಶಗಳನ್ನು ರದ್ದುಗೊಳಿಸಿ ನಿವೇಶನಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಶಾಸಕ ಟಿ.ಎಸ್.ಶ್ರೀವತ್ಸ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಶಾಸಕರು, ಮುಡಾದಲ್ಲಿ 2020ರಿಂದ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಅವರ ಅವಧಿಯಿಂದ ಜಿ.ಡಿ.ದಿನೇಶ್‌ಕುಮಾರ್ ಅವರ ಅವಧಿವರೆಗೂ ನಿವೇಶನಗಳನ್ನು ಮನಸೋಇಚ್ಛೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ದೂರಿದರು.
ತಮ್ಮ ಪತ್ನಿ ಪಾರ್ವತಿ ಅವರು ನಿವೇಶನಗಳನ್ನು ಹಿಂದಿರುಗಿಸಿರುವುದು ಸ್ವಾಗತಾರ್ಹ ನಿರ್ಧಾರ. ಹಾಗೆಯೇ ಅಕ್ರಮವಾಗಿ ಹಂಚಿಕೆ ಮಾಡಿರುವ ಎಲ್ಲ ನಿವೇಶನಗಳ ಹಂಚಿಕೆ ಆದೇಶಗಳನ್ನು ಸಾರ್ವಜನಿಕರು ಹಾಗೂ ಮುಡಾ ಹಿತದೃಷ್ಟಿಯಿಂದ ರದ್ದುಗೊಳಿಸಿ ನಿವೇಶನಗಳನ್ನು ಹಿಂಪಡೆಯಲು ಸೂಕ್ತ ಆದೇಶ ನೀಡಬೇಕು ಎಂದು ಮನವಿ ಮಾಡಿದರು.
2020 ರಿಂದ 2024ರ ಅವಧಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ ಕಾನೂನು ಬಾಹಿರವಾಗಿ ರಚಿತ ಬೇರೆ ಬಡಾವಣೆಗಳಲ್ಲಿ ನೀಡಲಾಗಿರುವ ಎಲ್ಲ ಬದಲಿ ನಿವೇಶನಗಳನ್ನು ಹಿಂಪಡೆಯಬೇಕು. ತಾಂತ್ರಿಕ ಸಮಿತಿಯ ವರದಿ ಮತ್ತು ಅಭಿಪ್ರಾಯಗಳನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಕೋರಿದ್ದಾರೆ.
ಅಕ್ರಮ ನಿವೇಶನಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಉಪ ನೋಂದಣಾಧಿಕಾರಿ, ಜಿಲ್ಲಾ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಿ ಈ ಆಸ್ತಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿವಾದಿತ ಆಸ್ತಿಗಳು ಎಂದು ದಾಖಲಿಸಬೇಕು, ಈ ಅಕ್ರಮ ನಿವೇಶನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳು ನಡೆಯದಂತೆ, ಮಾರಾಟ ಮಾಡದಂತೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಡಾ ಆಯುಕ್ತರಾಗಿ ಅಕ್ರಮಕ್ಕೆ ಅವಕಾಶ ನೀಡಿದಂತಹ ಡಿ.ಬಿ.ನಟೇಶ್, ಜಿ.ಡಿ.ದಿನೇಶ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಬೇಕು. ಶೇಕಡ 50:50 ಅನುಪಾತದ ಅಡಿಯಲ್ಲಿ ನಿವೇಶನಗಳನ್ನು ನೀಡಲಾಗಿರುವ ಪ್ರಮುಖ ಪ್ರಕರಣಗಳು ಇವೆ. ಅಬ್ದುಲ್ ವಾಹಿದ್ ಅವರಿಗೆ 28/02/2023 ರಲ್ಲಿ 55261 ಚ.ಅಡಿ ನಿವೇಶನವನ್ನು ಹಂಚಿಕೆ ಮಾಡಲಾಗಿದೆ. ಹಾಗೆಯೇ ಎಂ. ಶಾಂತಮ್ಮ ಅವರಿಗೆ 07/10/2023 ರಲ್ಲಿ 81670 ಚ.ಅಡಿ ನಿವೇಶನವನ್ನು ಹಂಚಿಕೆ ಮಾಡಲಾಗಿದೆ, ಎಂ. ಪಾಪಣ್ಣ ಅವರಿಗೆ 12/06/2024 ರಲ್ಲಿ 36753 ಚ.ಅಡಿ, ಡಿ.ನಾಗರಾಜು ಅವರಿಗೆ 15/06/2024 ರಲ್ಲಿ 98206 ಚ.ಅಡಿ ನಿವೇಶನವನ್ನು ಹಂಚಿಕೆ ಮಾಡಲಾಗಿದೆ. ಇದು ಅಕ್ರಮವಾಗಿದ್ದು, ಇವುಗಳನ್ನು ರದ್ದು ಪಡಿಸಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕುರಿತು ತನಿಖೆ ನಡೆಯುತ್ತಿದ್ದು, ಅಕ್ರಮವನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.