ಖಾಲಿ ಸಿಎ ನಿವೇಶನಗಳ ಮಂಜೂರಾತಿ ರದ್ದುಪಡಿಸಿ: ಮುಡಾ ಅಧ್ಯಕ್ಷ ಕೆ.ಮರೀಗೌಡ ಸೂಚನೆ

13
Published on

ಮೈಸೂರು: ಯಾವುದೇ ಚಟುವಟಿಕೆ ಇಲ್ಲದೆ ಖಾಲಿ ಉಳಿಸಿಕೊಂಡಿರುವ ಸಮುದಾಯ ಸೇವೆ (ಸಿಎ) ನಿವೇಶನಗಳ ಮಂಜೂರಾತಿ ರದ್ದುಪಡಿಸುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿದ್ಧಾರ್ಥನಗರದಲ್ಲಿರುವ ಸಿಐಟಿಬಿ ಛತ್ರ, ಭರತ್‌ನಗರ, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಬನ್ನಿಮಂಟಪ, ಬೆಲವತ್ತ, ಶ್ಯಾದನಹಳ್ಳಿಗಳಿಗೆ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದರು.
ಸಮುದಾಯದ ಅಭಿವೃದ್ಧಿಯ ಉದ್ದೇಶಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ರಿಯಾಯಿತಿ ದರದಲ್ಲಿ 30 ಅಥವಾ 90 ವರ್ಷಗಳಿಗೆ ಸಿಎ ನಿವೇಶನಗಳನ್ನು ಸಂಘ-ಸಂಸ್ಥೆ, ಟ್ರಸ್ಟ್‌ಗಳು ಗುತ್ತಿಗೆ ಪಡೆದುಕೊಂಡಿವೆ. ಆದರೆ ಆ ಜಾಗದಲ್ಲಿ ಸಮುದಾಯದ ಅಭಿವೃದ್ಧಿಯ ಯಾವುದೇ ಚಟುವಟಿಕೆ ನಡೆಸದೆ ಸುಮ್ಮನೆ ಖಾಲಿ ಉಳಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಅವುಗಳಲ್ಲಿ ಶೀಘ್ರ ಉದ್ದೇಶಿತ ಚಟುವಟಿಕೆ ಆರಂಭಿಸಬೇಕು. ಇಲ್ಲವಾದರೆ ಅಂತಹ ಸಿಎ ನಿವೇಶನಗಳ ಮಂಜೂರಾತಿ ರದ್ದುಪಡಿಸಿ, ಬೇರೊಂದು ಸಂಘ-ಸಂಸ್ಥೆ ಅಥವಾ ಟ್ರಸ್ಟ್‌ಗೆ ಗುತ್ತಿಗೆ ನೀಡುವಂತೆ ಸೂಚಿಸಿದರು.
ಗೋಕುಲಂನಲ್ಲಿ ಕುವೆಂಪು ಟ್ರಸ್ಟ್‌ಗೆ ಕೋಟ್ಯಂತರ ರೂ. ಬೆಲೆ ಬಾಳುವ 10.26 ಎಕರೆ ಜಾಗವನ್ನು ಮಂಜೂರು ಮಾಡಿದ್ದರೂ ಹಲವು ವರ್ಷಗಳಿಂದ ಆ ಜಾಗ ಖಾಲಿ ಇದೆ. ಸಿದ್ಧಾರ್ಥ ಬಡಾವಣೆಯಲ್ಲಿ ವಿದ್ಯಾಶಂಕರ ಟ್ರಸ್ಟ್ ಸಹ ಗುತ್ತಿಗೆ ಪಡೆದ ಜಾಗದಲ್ಲಿ ಏನು ಮಾಡಿಲ್ಲ. ಹೀಗೆ ನಗರದಲ್ಲಿ ಬಹಳಷ್ಟು ಸಿಎ ನಿವೇಶನಗಳು ಖಾಲಿ ಉಳಿದಿವೆ. ಇಂತಹ ನಿವೇಶನಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಯಾವುದೇ ಒತ್ತಡಕ್ಕೆ ಮಣಿಯದೆ ಮಂಜೂರಾತಿ ಆದೇಶ ರದ್ದು ಮಾಡಿ ಪ್ರಾಧಿಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಭರತನಗರದಲ್ಲಿ ಒಳಚರಂಡಿ ಸಮಸ್ಯೆ ಗಮನಕ್ಕೆ ಬಂದಿದೆ. ಪಟ್ಟಣ ಪಂಚಾಯಿತಿ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಿವಾಸಿಗಳಿಗೆ ಭರವಸೆ ನೀಡಿದರು.
ಸಿದ್ಧಾರ್ಥನಗರದಲ್ಲಿರುವ ಸಿಐಟಿಬಿ ಛತ್ರದ ಆವರಣಲ್ಲಿ 1.17 ಎಕರೆ ಜಾಗ ಇದೆ. ಹಾಗಾಗಿ ಈಗ ಇರುವ ಚಿಕ್ಕ ಭವನವನ್ನು ಕೆಡವಿ ಅಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಛತ್ರ, ಕಲ್ಯಾಣಮಂಟಪ ನಿರ್ಮಿಸಲಾಗುವುದು. ಛತ್ರದ ಸುತ್ತ ಮಳಿಗೆಗಳನ್ನು ನಿರ್ಮಿಸಿ ಪ್ರಾಧಿಕಾರಕ್ಕೆ ಆದಾಯ ಬರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಮ್ಮನಹಳ್ಳಿಯಲ್ಲಿ ಒಳಚರಂಡಿ ಇದ್ದರೂ ಸೆಪ್ಟಿಕ್ ಟ್ಯಾಂಕ್ ಇಲ್ಲದೆ ತೊಂದರೆಯಾಗಿದೆ. 1.70 ಕೋಟಿ ರೂ. ವೆಚ್ಚದಲ್ಲಿ ಟ್ಯಾಂಕ್ ನಿರ್ಮಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದು ವಾಲ್ಮೀಕಿ ಸಮುದಾಯ ಭವನ ಅಭಿವೃದ್ಧಿಗೆ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು. ಕಾಳಿಸಿದ್ದನಹುಂಡಿ ಕೆರೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಕಾರ್ಯದರ್ಶಿ ಶೇಖರ್, ಅಧೀಕ್ಷಕ ಇಂಜಿನಿಯರ್ ಧರಣೇಂದ್ರ, ಕಾರ್ಯನಿರ್ವಾಹಕ ಇಂಜಿನಿಯರ್ ನಾಗೇಶ್, ತಹಸೀಲ್ದಾರ್ ಮೋಹನಕುಮಾರಿ, ಟಿಪಿಎಂ ಶಿವರಾಂ, ಎಇಇ ಶಿವಣ್ಣ, ರೂಪಶ್ರೀ, ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್, ಆಪ್ತ ಸಹಾಯಕ ಗಂಗಾಧರ್, ಮುಖಂಡರಾದ ಬಿ.ರವಿ, ಪ್ರಕಾಶ್, ಶಿವಣ್ಣ, ಚಿಕ್ಕೀರಿ, ನಾಗರಾಜ, ಜೈಸ್ವಾಮಿ, ಚಿಕ್ಕಮಹಾದೇವ, ಮಹಾದೇವ, ಕೃಷ್ಣಪ್ಪ, ಶಿವಣ್ಣ, ಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net