

ಮೈಸೂರು: ನಾಮಫಲಕ ಕಾಯ್ದೆ ತಿದ್ದುಪಡಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಸ್ವಾಗತಿಸಿದೆ.
ರಾಜ್ಯದಲ್ಲಿರುವ ಎಲ್ಲ ಅಂಗಡಿ, ಆಸ್ಪತ್ರೆ, ಹೋಟೆಲ್, ವ್ಯಾಪಾರಿ ಸಂಸ್ಥೆಗಳ ನಾಮಫಲಗಳಲ್ಲಿ ಶೇ.60ರಷ್ಟು ಭಾಗ ಕನ್ನಡ ಭಾಷೆಯಲ್ಲೇ ಇರಬೇಕು ಎಂಬ ನೀತಿ ಜಾರಿಗೆ ತರಲಾಗುತ್ತಿದೆ. ಅದಕ್ಕಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಇದು ಸ್ವಾಗತಾರ್ಹ ಮತ್ತು ಸಂತಸದ ಸಂಗತಿ ಎಂದು ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದು ಕೇವಲ ತಂಡ ವಿಧಿಸುವಂತಹ ತಿದ್ದುಪಡಿ ಆಗಿದ್ದರೆ ಸಾಲದು. ಕನ್ನಡ ಭಾಷೆಗೆ ಆದ್ಯತೆ ನೀಡದ ಯಾವುದೇ ಕಾರ್ಪೋರೇಟ್ ಕಂಪನಿಗಳಾಗಲಿ, ಇತರ ವ್ಯಾಪಾರ-ವಹಿವಾಟಿನ ಸಂಸ್ಥೆಗಳ ಪರವಾನಿಗೆಯನ್ನು ರದ್ದು ಮಾಡಲು ಅವಕಾಶ ನೀಡುವ ಕಾಯ್ದೆ ಆಗಬೇಕು ಎಂದು ಸಲಹೆ ನೀಡಿದರು.
ಈ ಸಂಬಂಧ ಹೋರಾಟ ಮಾಡುವ ಯಾವುದೇ ಕನ್ನಡಪರ ಚಳವಳಿಗೆ ಸಂಘದ ಸಂಪೂರ್ಣ ಬೆಂಬಲವಿದೆ. ಆದರೆ ಅಂತಹ ಹೋರಾಟಗಳು ಶಾಂತಿ ಮತ್ತು ಅಹಿಂಸಾತ್ಮಕವಾಗಿ ಇರಬೇಕು. ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿಯನ್ನು ಉಂಟು ಮಾಡುವಂತಾಗಿರಬಾರದು ಎಂದು ಸ್ಪಷ್ಟಪಡಿಸಿದರಲ್ಲದೆ, ರಾಜ್ಯದ ಹೈಕೋರ್ಟ್‌ನಲ್ಲೂ ಕನ್ನಡ ಭಾಷೆಯಲ್ಲೇ ತೀರ್ಪುಗಳು ಬರಲು ಸರ್ಕಾರ ಅಗತ್ಯ ಕ್ರಮ ಅನುಸರಿಸಬೇಕು ಎಂದು ಆಗ್ರಹಿಸಿದರು.
ರೈತ ಸಮುದಾಯವನ್ನು ಕೀಳಾಗಿ ಬಿಂಬಿಸಿ ಅವಹೇಳನ ಮಾಡಿರುವ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರ ಹೇಳಿಕೆ ಖಂಡನೀಯ. ಈ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದೆ. ಇದಕ್ಕೆ ಮಣಿದು ಕೂಡಲೇ ಶಿವಾನಂದ ಪಾಟೀಲ್ ರೈತ ಕುಲದ ಕ್ಷಮೆ ಕೋರಬೇಕು. ಜತೆಗೆ ಮುಂದಿನ ದಿನಗಳಲ್ಲಿ ಇಂತಹ ಅವಹೇಳನಕಾರಿ ಹೇಳಿಕೆಯನ್ನು ನೀಡುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಮುಂಬರುವ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಅದರಲ್ಲಿ ರೈತ ಪರ ಯೋಜನೆಗಳಿಗೆ ಆದ್ಯತೆ ನೀಡಬೇಕು. ಈ ಸಂಬಂಧ ರೈತ ಮತ್ತು ಗ್ರಾಮೀಣ ಪರ ಯಾವ ರೀತಿಯ ಯೋಜನೆಗಳು ಬೇಕೆಂಬುದನ್ನು ಸಂಘವು ಸದ್ಯದಲ್ಲೇ ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ಸರ್ಕಾರಕ್ಕೆ ಸಲ್ಲಿಸಲಿದೆ. ಈ ಸಂಬಂಧ ಸಂಘದ ಪದಾಧಿಕಾರಿಗಳೂ ಸೇರಿದಂತೆ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೃಷ್ಟಿ ಕ್ಷೇತ್ರದಲ್ಲಿ ನುರಿತ, ಪರಿಣಿತಿ ಹೊಂದಿರುವ ವ್ಯಕ್ತಿಗಳು ಒಳಗೊಂಡಂತೆ ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಪ್ರಸನ್ನ ಎನ್.ಗೌಡ, ಚಂದ್ರಶೇಖರ್, ರಾಘವೇಂದ್ರ, ಪಿ.ಮರಂಕಯ್ಯ ಇದ್ದರು.