

ಹುಬ್ಬಳ್ಳಿ: ಇಲ್ಲಿಯ ಕೆನರಾ ಬ್ಯಾಂಕ್ ವೃತ್ತ ಕಚೇರಿ ಎಂಎಸ್ಎಂಇ ಸುಲಭ್ ಮತ್ತು ಕ್ಷೇತ್ರಿಯ ಕಾರ್ಯಾಲಯ ವತಿಯಿಂದ ಎಂಎಸ್ಎಂಇ ಗ್ರಾಹಕರನ್ನು ತಲುಪಲು ವಿಶೇಷ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ವೃತ್ತ ಕಚೇರಿಯ ಮಹಾಪ್ರಬಂಧಕ ಎಂ. ವಿಜಯಕುಮಾರ, ದೇಶದ ಅಭಿವೃದ್ಧಿಯಲ್ಲಿ ಎಂಎಸ್ಎಂಇ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮದಾರರು ಬ್ಯಾಂಕಿನಿಂದ ಲಭ್ಯವಾಗುವ ಸಾಲ ಸೌಲಭ್ಯದ ಸದುಪಯೋಗ ಪಡೆಯಬೇಕು. ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದರು.
ಎಂಎಸ್ಎಂಇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿ ಕೊಡಲಾಗಿದೆ. ಅಪಘಾತ ವಿಮೆ, ಉಚಿತ ಜೀವ ವಿಮೆ ಇತ್ಯಾದಿ ನೀಡಲಾಗುತ್ತಿದೆ. ಉದ್ಯಮಿಗಳು ತಮ್ಮ ಸಿಬ್ಬಂದಿಯ ಖಾತೆ ತೆರೆದು ಯೋಜನೆ ಲಾಭ ಪಡೆಯಬೇಕೆಂದು ಹೇಳಿದರು.
ಉಪ ಮಹಾಪ್ರಬಂಧಕ ಜೆ.ಪಿ. ಪನಿಗ್ರಹಿ ಮಾತನಾಡಿ, ಎಂಎಸ್ಎಂಇ ಕ್ಷೇತ್ರವು ದೇಶದ ಜಿಡಿಪಿಯಲ್ಲಿ ಶೇ. 33ರಷ್ಟು ಪಾಲು ಹೊಂದಿದೆ. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿದೆ ಎಂದರು.
ಸಹಾಯಕ ಮಹಾಪ್ರಬಂಧಕ ಯತೀಶಕುಮಾರ ಗೋಯಲ್, ಎಂಎಸ್ಎಂಇ ಟಕಗಳ ವರ್ಗೀಕರಣ ಮತ್ತು ಉದ್ಯಮ ನೋಂದಣಿ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಅನೇಕ ಗ್ರಾಹಕರಿಗೆ ಸಾಲ ಯೋಜನೆಯ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಗ್ರಾಹಕರ ಕುಂದುಕೊರತೆ ಆಲಿಸಲಾಯಿತು.
ಕ್ಷೇತ್ರಿಯ ಕಾರ್ಯಾಲಯದ ಸಹಾಯಕ ಮಹಾಪ್ರಬಂಧಕ ರತಿಕಾಂತ ದೊರಾ, ಶ್ರೀನಿವಾಸ ಎಸ್., ಇಮ್ರಾಖಾನ್ ಜಹಗೀರದಾರ, ಜಿತೇಂದ್ರ ಬಾಲೇರಾವ್, ಇತರರು ಇದ್ದರು.
ಬ್ಯಾಂಕಿನ ಹಿರಿಯ ಪ್ರಬಂಧಕ ಸೌಜನ್ಯ ನಿರೂಪಿಸಿದರು. ಬೆಳಗಾವಿ, ಹಾವೇರಿ, ಗದಗ, ಬಳ್ಳಾರಿ, ರಾಯಚೂರ ಜಿಲ್ಲೆಗಳ ಗ್ರಾಹಕರು ಪಾಲ್ಗೊಂಡಿದ್ದರು.