

ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ಜುಲೈ ಮೊದಲ ವಾರದಲ್ಲಿ ನೀರು ಹರಿಸುವ ಮಾಹಿತಿ ಇದ್ದು, ಜೂನ್ ಅಂತ್ಯದವರೆಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಕೆರೆಗಳು ಖಾಲಿಯಾಗಿದ್ದರೆ ಭರ್ತಿ ಮಾಡಿ ಸಮರ್ಪಕ ನಿರ್ವಹಣೆ ಮಾಡಬೇಕೆಂದು ಪಿಡಿಒಗಳಿಗೆ ತಹಸೀಲ್ದಾರ್ ಅರುಣ್ ದೇಸಾಯಿ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿಡಿಒಗಳ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಜವಳಗೇರಾ, ಗೊರೇಬಾಳ ಹಾಗೂ ಗುಂಜಳ್ಳಿ ಹೊರತುಪಡಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಪಿಡಿಒಗಳು ತಿಳಿಸಿದರು. ನಿಮ್ಮ ಮಾಹಿತಿ ಪ್ರಕಾರವೇ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಎಲ್ಲಿಯಾದರೂ ನೀರಿನ ಸಮಸ್ಯೆ ಕಂಡು ಬಂದರೆ ಪಿಡಿಒಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಡದಂಡೆ ನಾಲೆಗೆ ನೀರು ಹರಿಸಿದಾಗ ಕುಡಿವ ನೀರಿನ ಕೆರೆಗಳನ್ನು ಸಮರ್ಪಕವಾಗಿ ತುಂಬಿಸಿಕೊಳ್ಳಲು ಪ್ರತಿ ಎರಡು ಗ್ರಾಮ ಪಂಚಾಯಿತಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಎಲ್ಲ ಕೆರೆಗಳನ್ನು ಸಂಪೂರ್ಣ ಭರ್ತಿ ಮಾಡಬೇಕು ಎಂದು ತಹಸೀಲ್ದಾರ್ ತಾಕೀತು ಮಾಡಿದರು. ಕೆರೆಗಳಿರುವ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ ವರದಿ ನೀಡಬೇಕೆಂದು ತಾಪಂ ಇಒಗೆ ತಹಸೀಲ್ದಾರ್ ಅರುಣ್ ದೇಸಾಯಿ ಸೂಚನೆ ನೀಡಿದರು.