

ಮೂಡಿಗೆರೆ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಶೌಚಗೃಹ ಇಂಗುಗುಂಡಿ ತುಂಬಿ ಚರಂಡಿ ಮೂಲಕ ಹರಿದು ಪಕ್ಕದ ಹೊಯ್ಸಳ ಕ್ರೀಡಾಂಗಣ ಹಾಗೂ ಸುತ್ತಲಿನ ಮನೆಯಂಗಳಕ್ಕೆ ಹರಿಯುತ್ತಿರುವುದರಿಂದ ಸಾರ್ವಜನಿಕರು ದುರ್ವಾಸನೆಯಿಂದ ಕಂಗೆಟ್ಟು ಹೋಗಿದ್ದಾರೆ.
1984ರಲ್ಲಿ ಬಸ್ ನಿಲ್ದಾಣ ನಿರ್ವಿುಸಿದ ವೇಳೆ ಶೌಚಗೃಹದ ಗುಂಡಿ ತುಂಬಿದಾಗ ತ್ಯಾಜ್ಯ ಹೊರಕ್ಕೆ ಹರಿಯಲು ಚರಂಡಿ ನಿರ್ವಿುಸಲಾಗಿತ್ತು. ಇದರಿಂದ ತ್ಯಾಜ್ಯ ತಗ್ಗು ಪ್ರದೇಶಕ್ಕೆ ಹರಿಯಲು ಬಿಡಲಾಗಿತ್ತು. ಈಗ ನಿಲ್ದಾಣದ ಕೆಳ ಭಾಗದಲ್ಲಿ ವಾಸದ ಮನೆಗಳು ಹಾಗೂ ಹೊಯ್ಸಳ ಕ್ರೀಡಾಂಗಣ, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಇದೆ. ಅಲ್ಲಿಗೆ ತ್ಯಾಜ್ಯ ಹರಿಯುತ್ತಿರುವುದರಿಂದ ಪ್ರತಿದಿನ ಕ್ರೀಡಾಂಗಣದಲ್ಲಿ ಆಟಗಾರರು ದುರ್ವಾಸನೆಯಿಂದ ಬೇಸತ್ತುಹೋಗಿದ್ದಾರೆ.
ಐದು ವರ್ಷದ ಹಿಂದೆ ಬಸ್ ನಿಲ್ದಾಣದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ವಿುಸಲಾಗಿದೆ. ಶೌಚಗೃಹದ ಗುಂಡಿಯನ್ನು ಹೊಸದಾಗಿ ನಿರ್ವಿುಸಿದ್ದರೂ ತೀರಾ ಚಿಕ್ಕದಾಗಿದೆ. ಇದರಿಂದ ಶೌಚಗೃಹದ ತ್ಯಾಜ್ಯ ಮತ್ತೆ ಚರಂಡಿ ಸೇರುತ್ತಿದೆ. ಇದು ಸ್ಥಳೀಯ ನಿವಾಸಿಗಳು, ಪ್ರಯಾಣಿಕರು ಹಾಗೂ ಕ್ರೀಡಾಪಟುಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾರಿಗೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತ್ಯಾಜ್ಯ ಶೌಚಗೃಹದ ಇಂಗುಗುಂಡಿಯಿಂದ ಹೊರಗೆ ಹರಿಯದಂತೆ ವ್ಯವಸ್ಥೆ ಮಾಡಬೇಕಿದೆ.
ಬಸ್ ನಿಲ್ದಾಣದ ಶೌಚಗೃಹದ ಬದಿಯಲ್ಲಿ ನನ್ನ ಮನೆಯಿದೆ. ತ್ಯಾಜ್ಯದ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡೇ ಇರುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ. ದುರ್ವಾಸನೆಯಿಂದ ನನ್ನ ಮನೆಗೆ ಬಾಡಿಗೆದಾರರೂ ಬರುತ್ತಿಲ್ಲ. ನಿಲ್ದಾಣದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಸುರೇಶ್ ಗೌಡ ಒತ್ತಾಯಿಸಿದ್ದಾರೆ
ಶೌಚಗೃಹದ ಇಂಗುಗುಂಡಿಯಿಂದ ತ್ಯಾಜ್ಯ ಹೊರಬಂದು ದುರ್ವಾಸನೆ ಹರಡಿರುವುದು ನನ್ನ ಗಮನಕ್ಕೆ ಬಂದಿದೆ. ಇನ್ನು ಎರಡ್ಮೂರು ದಿನದಲ್ಲಿ ಇಂಗುಗುಂಡಿಯಿಂದ ತ್ಯಾಜ್ಯ ತೆರವುಗೊಳಿಸಿ ಸರಿಪಡಿಸಲಾಗುವುದು ಎಂದು ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕ ಸತೀಶ್ ಭರವಸೆ ನೀಡಿದ್ದಾರೆ.