ನಾಲೆ ಆಧುನೀಕರಣಕ್ಕೆ ಅನುದಾನ ಅಗತ್ಯ

15LNG02
ಲಿಂಗಸುಗೂರು ಸಮೀಪದ ನವಲಿ ಬಳಿಯ ರಾಂಪೂರ ಏತನೀರಾವರಿ ಯೋಜನೆ ಜಾಕ್‌ವೆಲ್‌ಗೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಬಿಜೆಎನ್‌ಎಲ್ ಎಇಗಳಾದ ಮಂಜುನಾಥ, ವೈಜನಾಥ ಪಾಟೀಲ್ ಇದ್ದರು.
Published on

ಲಿಂಗಸುಗೂರು: ಬಸವಸಾಗರ ಜಲಾಶಯದ ಹಿನ್ನೀರು ಬಳಸಿಕೊಂಡು ಕೈಗೆತ್ತಿಕೊಂಡ ತಾಲೂಕಿನ ರಾಂಪೂರ (ನವಲಿ ಜಡೇಯಶಂಕರಲಿಂಗೇಶ್ವರ) ಏತನೀರಾವರಿ ಯೋಜನೆ ವ್ಯಾಪ್ತಿಯ ನಾಲೆಗಳು ಆಧುನೀಕರಣಗೊಂಡರೆ ಜಮೀನುಗಳಿಗೆ ಸಮರ್ಪಕ ನೀರು ಹರಿಸಲು ಸಾಧ್ಯವಾಗಲಿದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ತಾಲೂಕಿನ ನವಲಿ ಮತ್ತು ಆನೆಹೊಸೂರು ಬಳಿಯ ರಾಂಪೂರ ಏತನೀರಾವರಿ ಜಾಕ್‌ವೆಲ್‌ಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಬಹುತೇಕ ಏತನೀರಾವರಿ ಯೋಜನೆಗಳು ನಾನಾ ಕಾರಣಗಳಿಂದ ಯಶಸ್ವಿ ಕಂಡಿಲ್ಲ. ಆದರೆ ರಾಂಪೂರ ಏತನೀರಾವರಿ ಯೋಜನೆ ಯಶಸ್ವಿ ಕಂಡಿದೆ. ಆದರೆ ಕಳೆದ ಹಲವು ವರ್ಷಗಳಿಂದ ರಾಂಪೂರ ಏತನೀರಾವರಿ ಯೋಜನೆಗಳ ಮೂರು ಮೋಟಾರ್ ಪಂಪ್‌ಗಳ ಪೈಕಿ ಕೇವಲ ಒಂದು ಪಂಪ್ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಕಾಲುವೆಗಳು ಹಾಳಾಗಿವೆ. ಹೊಂಡು ತುಂಬಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಇದರಿಂದ ಕೊನೆಯ ಭಾಗದ ರೈತರ ಜಮೀನುಗಳಿಗೆ ಸಮರ್ಪಕ ನೀರು ತಲುಪುತ್ತಿಲ್ಲ.

ಈ ಬಗ್ಗೆ ಕೆಬಿಜೆಎನ್‌ಎಲ್ ಎಂಡಿ ಮತ್ತು ಇಇಗಳ ಜತೆ ಹಲವು ಬಾರಿ ಗಮನಕ್ಕೆ ತಂದಿರೂ ಪ್ರಯೋಜವಾಗಿಲ್ಲ. ಯೋಜನೆ ವ್ಯಾಪ್ತಿಯ ನಾಲೆಗಳಿಗೆ ಎಸ್ಕೇಪ್ ಗೇಟ್‌ಗಳಿಲ್ಲದ ಕಾರಣ ನೀರು ಹಳ್ಳಕ್ಕೆ ವ್ಯರ್ಥ ಪೋಲಾಗುತ್ತಿದೆ. ನಾಲೆಗಳ ಏರಿ ಏರಿಸಿ ಆಧುನೀಕರಗೊಳಿಸಿ ಎಸ್ಕೇಪ್ ಗೇಟ್‌ಗಳನ್ನು ಅಳವಡಿಸಿದರೆ ರೈತರ ಜಮೀನುಗಳಿಗೆ ಸಮರ್ಪಕ ನೀರು ದೊರೆಯಲು ಸಾಧ್ಯ. ಈ ಭಾಗದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ನಾಲೆಗಳ ಆಧುನೀಕರಣಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net