ಸಂತೋಷದಿಂದ ರಾಜ್ಯಸರ್ಕಾರಕ್ಕೆ ಆಶೀರ್ವದಿಸಿ: ಶಾಸಕ ರವಿಕುಮಾರ್ ಗಣಿಗ ಮನವಿ

Canal and road development work launched Mandya
Published on

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದಲ್ಲಿಯೂ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯುತ್ತಿದೆ. ಹಳ್ಳಿಗಳ ಇತಿಹಾಸದಲ್ಲಿಯೇ ಬಿಡುಗಡೆಯಾಗದಂತಹ ಅನುದಾನವನ್ನು ಕೇವಲ ಎರಡೂವರೆ ವರ್ಷದ ಅವಧಿಯಲ್ಲಿ ಕೊಡಲಾಗಿದೆ. ಆದ್ದರಿಂದ ಗ್ರಾಮಸ್ಥರು ಸಂತೋಷದಿಂದ ರಾಜ್ಯಸರ್ಕಾರವನ್ನು ಆಶೀರ್ವದಿಸಿ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ದೊಡ್ಡಬಾಣಸವಾಡಿ ಗ್ರಾಮದಲ್ಲಿ 4.90 ಕೋಟಿ ರೂ ವೆಚ್ಚದಲ್ಲಿ ನಾಲೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲೂ ಕೋಟ್ಯಂತರ ರೂ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಗ್ರಾಮಸ್ಥರ ನಿರೀಕ್ಷೆಯನ್ನೂ ಮೀರಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಉಳಿದಿರುವ ಅವಧಿಯಲ್ಲಿಯೂ ಇನ್ನಷ್ಟು ಅಭಿವೃದ್ಧಿ ಮಾಡಿಕೊಡುತ್ತೇವೆ. ಒಟ್ಟಾರೆ ಜನರು ಖುಷಿಯಾಗಿ ನೆಮ್ಮದಿಯಿಂದ ಜೀವನ ಮಾಡಿ. ಅದೇ ರೀತಿ ನಮ್ಮ ಸರ್ಕಾರಕ್ಕೆ ಇನ್ನಷ್ಟು ರಾಜಕೀಯ ಶಕ್ತಿ ಕೊಡಿ ಎಂದರು.

ನಾಲೆ ಆಧುನೀಕರಣ ಕಾಮಗಾರಿಯ ಪ್ರಯೋಜನ ಮಳೆಗಾಲದಲ್ಲಿ ತಿಳಿಯುವುದಿಲ್ಲ. ಆದರೆ ಬೇಸಿಗೆ ಅವಧಿಯಲ್ಲಿ ಇದರ ಅನುಕೂಲ ಏನೆಂದು ಗೊತ್ತಾಗುತ್ತದೆ. ಕಾವೇರಿ ನೀರಾವರಿ ನಿಗಮದಿಂದ 300 ಕೋಟಿ ರೂ ವೆಚ್ಚದಲ್ಲಿ ನಾಲೆಗಳ ಆಧುನೀಕರಣ ಕೆಲಸ ನಡೆಯುತ್ತಿದೆ. ರೈತರಿಗೆ ಅನುಕೂಲ ಮಾಡುವುದು ನಮ್ಮ ಸರ್ಕಾರದ ಉದ್ದೇಶ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರು, ಮಾಜಿ ಅಧ್ಯಕ್ಷ ಮಹೇಶ್, ಸೊಸೈಟಿ ಅಧ್ಯಕ್ಷ ಬಿ.ಎಸ್.ಹರೀಶ್, ಉಪಾಧ್ಯಕ್ಷ ಗೋಪಾಲ್, ವಸಂತಕುಮಾರ್, ಚನ್ನೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net