

ಹುಬ್ಬಳ್ಳಿ: ಕೆನಡಾದ ಪ್ರಧಾನಿ ಹುದ್ದೆಗೆ ಕನ್ನಡಿಗರೊಬ್ಬರು ಸ್ಪರ್ಧೆ ಮಾಡುತ್ತಿರುವುದು ಕರ್ನಾಟಕದ ಮಟ್ಟಿಗೆ ಅತ್ಯಂತ ಹೆಮ್ಮೆಯ ಸಂಗತಿ. ಇಷ್ಟು ಮಾತ್ರವಲ್ಲ, ಇಂತಹ ಸಾಧನೆ ಮಾಡುತ್ತಿರುವ ಕನ್ನಡಿಗ ಚಂದ್ರ ಆರ್ಯ ಅವರು ನಮ್ಮ ಧಾರವಾಡದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು ಎಂಬುದು ಇನ್ನಷ್ಟು ಖುಷಿಯ ವಿಚಾರ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕೌಸಾಳಿ ಇನ್ ಸ್ಟಿಟ್ಯೂಟ್ ಮ್ಯಾನೇಜಮೆಂಟ್ ಸ್ಟಡಿಸ್ ನಲ್ಲಿ ಎಂಬಿಎ ಓದಿರುವ ಚಂದ್ರ ಆರ್ಯ ಅವರು, ಇಲ್ಲಿನವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.
1986- 88ರಲ್ಲಿ ಎಂಬಿಎ ಅಧ್ಯಯನ ಮಾಡಿರುವ ಅವರಿಗೆ ಅಂದಿನ ಡೀನ್ ಆಗಿದ್ದ ಡಾ. ಅಶೋಕ ಚಚಡಿ ಅವರು ತಮ್ಮ ಶಿಷ್ಯನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕೆನಡಾದ ಜಸ್ಟಿನ್ ಟ್ರುಡೋ ಅವರು ಪ್ರಧಾನಿ ಹುದ್ದೆ ಮತ್ತು ಲಿಬರಲ್ ಪಕ್ಷದ ನಾಯಕತ್ವ ತೊರೆದ ನಂತರ ಸಂಸದ ಚಂದ್ರ ಆರ್ಯ ಅವರು ದೇಶವನ್ನು ಸಾರ್ವಭೌಮ ಗಣರಾಜ್ಯ ಮಾಡುವ ಭರವಸೆಯೊಂದಿಗೆ ಲಿಬರಲ್ ನಾಯಕತ್ವಕ್ಕೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ಕೆನಡಾದ ಒಟ್ಟಾವಾ ಕ್ಷೇತ್ರದ ಸಂಸದ ಚಂದ್ರ ಆರ್ಯ ಅವರು ಲಿಬರಲ್ ಪಕ್ಷದ ನಾಯಕತ್ವಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಜತೆಗೆ ಕೆನಡಾದ ಪ್ರಧಾನ ಮಂತ್ರಿ ರೇಸ್ ನಲ್ಲಿ ಇದ್ದಾರೆ.
ಕರ್ನಾಟಕದ ತುಮಕೂರು ಜಿಲ್ಲೆ ಶಿರಾ ತಾಲೂಕು ಮೂಲದ ಆರ್ಯ ಅವರು ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದಿದ್ದರು. ಸದ್ಯ ಕೆನಡಾ ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿದ್ದು, ಹಲವು ಸುಧಾರಣೆ ಕ್ರಮಗಳ ಬಗ್ಗೆ ಅಲ್ಲಿನ ಜನರಲ್ಲಿ ಭರವಸೆ ಮೂಡಿಸಿದ್ದಾರೆ.
ಸಂಸದರಾಗಿ ಆಯ್ಕೆಯಾದ ನಂತರ ಸಂಸತ್ ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದರು.