

ಭಾರತೀಯರು ಗಮನಾರ್ಹ ಸಂಖ್ಯೆಯಲ್ಲಿ ನೆಲೆಸಿರುವ ಉತ್ತರ ಅಮೆರಿಕ ಖಂಡದ ಕೆನಡಾದಲ್ಲಿ ಆರು ತಿಂಗಳಿನಿಂದ ಕುಟುಂಬದ ಜತೆ ನೆಲೆಸಿರುವ ದಕ್ಷಿಣ ಕನ್ನಡ ಮೂಡುಬಿದಿರೆ ನಿಡ್ಡೋಡಿ ಮೂಲದ ಶಿಕ್ಷಕಿ ಜೋಯ್ಸ್ ಮೋನಿಸ್ ಕರೊನಾ ಪರಿಸ್ಥಿತಿ ಬಗ್ಗೆ ‘ವಿಜಯವಾಣಿ’ ಜತೆ ಅನುಭವ ಹಂಚಿಕೊಂಡಿದ್ದಾರೆ.
ದೇಶದಲ್ಲಿ 6268 ಕರೊನಾ ಪಾಸಿಟಿವ್(ಜನಸಂಖ್ಯೆ 3.76 ಕೋಟಿ) ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 504 ಮಂದಿ ಗುಣಮುಖರಾಗಿದ್ದು, 63 ಮಂದಿ ಮೃತಪಟ್ಟಿದ್ದಾರೆ. ನಾವು ವಾಸಿಸುವ ಕಲ್ಗೇರಿ ನಗರದಲ್ಲಿ 408 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 50 ಮಂದಿ ಗುಣಮುಖರಾಗಿದ್ದರೂ, ಯಾರೊಬ್ಬರೂ ಮೃತಪಟ್ಟಿಲ್ಲ.
ಕೆನಡಾ ಪ್ರಧಾನಿ ಪತ್ನಿ ಸೋಫಿ ಟ್ರಾಡೋ ಕರೊನಾ ಸೋಂಕಿಗೆ ಒಳಗಾಗಿದ್ದು, ಸರ್ಕಾರ ತನ್ನ ದೇಶದ ಜನರ ಸುರಕ್ಷತೆಗೆ ಪರಿಣಾಮಕಾರಿ ಕ್ರಮ ಕೈಗೊಂಡಿದೆ. ನಾವು ವಾಸಿಸುವ ಕಲ್ಗೇರಿ ನಗರದಲ್ಲಿ ಶೇ.25ರಷ್ಟು ಕರ್ನಾಟಕ ಕರಾವಳಿಯ ಜನರು ಇದ್ದು, ಎಲ್ಲರೂ ಕ್ಷೇಮವಾಗಿದ್ದಾರೆ ಎನ್ನುವುದು ಈವರೆಗಿನ ಮಾಹಿತಿ.
- ಪ್ರಕಾಶ್ ಮಂಜೇಶ್ವರ, ಮಂಗಳೂರು
ಹೆಲ್ಪ್ಲೈನ್/ ಟೋಲ್ ಫ್ರೀ ನಂಬರ್: ಲಾಕ್‌ಡೌನ್ ಸಂದರ್ಭ ಜನರ ತುರ್ತು ಅಗತ್ಯಗಳಿಗೆ ಸಹಾಯವಾಣಿ ದಿನದ 24 ಗಂಟೆ ಕಾರ್ಯಾಚರಣೆ ನಡೆಸುತ್ತದೆ. ಸಹಾಯವಾಣಿ ನಂಬರ್‌ಗೆ ಕರೆ ಮಾಡಿದರೆ ಆರೋಗ್ಯ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಕರೆ ಸ್ವೀಕರಿಸುವವರು ಸುಮಾರು ಏಳು ಪ್ರಶ್ನೆಗಳನ್ನು ಕೇಳಿ ಕರೆ ಮಾಡಿದವರಿಗೆ ಯಾವ ರೀತಿಯ ಚಿಕಿತ್ಸೆ ಅಗತ್ಯವಿದೆ ಎಂದು ನಿರ್ಧರಿಸುತ್ತಾರೆ. ಕರೆ ಮಾಡಿದವರು ಅನಾರೋಗ್ಯದಲ್ಲಿ ಇರುವವರ ಟ್ರಾವೆಲ್ ಹಿಸ್ಟರಿ, ರೋಗ ಲಕ್ಷಣ ಮತ್ತಿತರ ಲಕ್ಷಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಎಮರ್ಜೆನ್ಸಿ ನಂಬರ್‌ಗೆ ಕರೆ ಮಾಡಿದರೆ ಆಂಬುಲೆನ್ಸ್ ಬರುತ್ತದೆ.
ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಆದರೆ ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆ ಇಲ್ಲ. ತುರ್ತು ಪರಿಸ್ಥಿತಿ ನಿಭಾಯಿಸಲು ಸರ್ಕಾರ ವಿವಿಧ ಕಾರ್ಯಗಳನ್ನು ಜಾರಿಗೊಳಿಸಿದೆ. ಕೆಲಸ ಇದ್ದು ಈಗ ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತವರಿಗೆ ಸರ್ಕಾರವೇ ಮಾಸಿಕ 2000 ಡಾಲರ್ ನೀಡುತ್ತಿದೆ. ಬಡವರಿಗೆ ಫುಡ್ ಬ್ಯಾಂಕ್, ಚಾರಿಟೆಬಲ್ ಟ್ರಸ್ಟ್‌ಗಳ ಮೂಲಕ ಆಹಾರ ಒದಗಿಸಲಾಗುತ್ತದೆ. ಬೆಳಗ್ಗೆಯಿಂದ ರಾತ್ರಿ 10 ಗಂಟೆ ತನಕ ದಿನಸಿ ಅಂಗಡಿಗಳು ತೆರೆದಿರುತ್ತವೆ. ಅಗತ್ಯ ಇರುವವರು ಒಬ್ಬರೇ ಮಾರುಕಟ್ಟೆಗೆ ತೆರಳಿ ಅಗತ್ಯ ವಸ್ತುಗಳನ್ನು ಕೊಂಡು ಮನೆಗೆ ತೆರಳಬೇಕು. ಹೋಟೆಲ್‌ಗಳು ತೆರೆದಿವೆ, ಉಪಹಾರ ಸೇವಿಸಲು ಅವಕಾಶವಿಲ್ಲ. ಪಾರ್ಸೆಲ್ ಕೊಂಡೊಯ್ಯ ಬಹುದು. ಸಮೀಪದ ಗುರುದ್ವಾರದಲ್ಲಿ ಉಪಹಾರದ ಪೊಟ್ಟಣಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಸ್ಯಾನಿಟೈಸರ್‌ಗಳು ಉಚಿತವಾಗಿ ಬಳಕೆಗೆ ಲಭ್ಯ. ಹೊರಗೆ ತೆರಳುವ ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸುತ್ತಾರೆ.
ಸದ್ಯದ ಪರಿಸ್ಥಿತಿ
ಎಲ್ಲ ಸರ್ಕಾರಿ ಕಚೇರಿಗಳು ತೆರೆದಿವೆ. ಆದರೆ ಅಲ್ಲಿಗೆ ತುರ್ತು ಸೇವೆ ಹೊರತುಪಡಿಸಿ ಉಳಿದ ಸಂದರ್ಭ ಸಾರ್ವಜನಿಕರ ಭೇಟಿಗೆ ಅವಕಾಶವಿಲ್ಲ. ಆನ್‌ಲೈನ್ ಮೂಲಕವೇ ಸರ್ಕಾರಿ ಸೇವೆ ಪಡೆಯಲು ಅವಕಾಶವಿದೆ. ರೈಲುಗಳ ಸಂಖ್ಯೆ ಶೇ.60ರಷ್ಟು ಕಡಿತ ಮಾಡಲಾಗಿದೆ. ಬಹುತೇಕ ಬಸ್‌ಗಳು ಓಡಾಡುತ್ತವೆ. ಪೊಲೀಸ್ ವ್ಯವಸ್ಥೆ ಚೆನ್ನಾಗಿದೆ. ಸರ್ಕಾರದ ಆದೇಶ, ಸೂಚನೆಗಳನ್ನು ಜನರು ಪಾಲಿಸುತ್ತಾರೆ. ಆದ್ದರಿಂದ ದೇಶದ ಇಡೀ ವ್ಯವಸ್ಥೆ ಸುಗಮವಾಗಿ ಸಾಗುತ್ತದೆ. ವೆಬ್‌ಸೈಟ್, ವಿವಿಧ ಮಾಧ್ಯಮಗಳ ಮೂಲಕ ಸರ್ಕಾರ ಸಕಾಲದಲ್ಲಿ ಮಾಹಿತಿ ನೀಡುತ್ತಿದೆ. ಈಗ ಅಲ್ಲಲ್ಲಿ ಕೆಲವು ಫಲಕಗಳನ್ನು ಕೂಡ ಹಾಕಲಾಗಿದೆ.
ಆನ್‌ಲೈನ್ ತರಗತಿ: ಶಾಲೆಗಳು ಮುಚ್ಚಿವೆಯಾದರೂ, ಶಾಲಾ ವೇಳಾಪಟ್ಟಿ ಪ್ರಕಾರ ಆನ್‌ಲೈನ್ ತರಗತಿಗಳು ನಿಯಮಿತವಾಗಿ ನಡೆಯುತ್ತಿವೆ. ಪ್ರಥಮ ಪಿಯು ಓದುತ್ತಿರುವ ನನ್ನ ದೊಡ್ಡ ಮಗಳು, ಎಂಟನೇ ತರಗತಿ ಓದುತ್ತಿರುವ ಚಿಕ್ಕ ಮಗಳು ಆನ್‌ಲೈನ್ ಮೂಲಕವೇ ಅವರಿಗೆ ಮೀಸಲಿಟ್ಟ ಪ್ರತ್ಯೇಕ ಕೊಠಡಿಯಲ್ಲಿ ಅಭ್ಯಾಸ ನಡೆಸುತ್ತಾರೆ. ಶಾಲಾ ಬೋಧಕ ವರ್ಗವೇ ತರಗತಿಗಳನ್ನು ನಡೆಸುತ್ತವೆ. ಪ್ರಾಜೆಕ್ಟ್ ವರ್ಕ್, ಅಸೈನ್‌ಮೆಂಟ್ ಎಲ್ಲ ಶಾಲಾ ಸಮಯದಲ್ಲಿ ಇರುವಂತೆಯೇ ನಡೆಯುತ್ತದೆ. ಪರೀಕ್ಷೆಗಳನ್ನು ಮಾತ್ರ ಮುಂದೂಡಲಾಗಿದೆ.