

ಆನೇಕಲ್: ಸ್ವಾತಂತ್ರ್ಯಕ್ಕಾಗಿ ದುಡಿದವರನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್ ಮಹದೇವಯ್ಯ ಹೇಳಿದರು.
ಪಟ್ಟಣದ ಪುಟ್ಬಾಲ್ ಮೈದಾನದಲ್ಲಿ ಮಾತನಾಡಿದ ಅವರು, ಕರೊನಾ ಸೋಂಕಿಗೆ ಭಯಪಡದೆ ಧೈರ್ಯದಿಂದ ಎದುರಿಸುವುದರಿಂದ ಕರೊನಾ ದೂರ ಮಾಡಬಹುದು. ತಾಲೂಕಿನಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಾಧ್ಯಮದವರು ಕರೊನಾ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಕರೊನಾ ಸೋಂಕು ತಗುಲಿದರೆ ಭಯಪಡಬಾರದು. ನನಗೆ ಹಾಗೂ ನನ್ನ ಇಬ್ಬರೂ ಮಕ್ಕಳಿಗೆ ಕರೊನಾ ಬಂದಿತ್ತು. ಮನುಷ್ಯ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಆದರೆ ನಮ್ಮ ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದರು.
ಕರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷೆ ಕವಿತಾ ಸಂಪತ್, ಉಪಾಧ್ಯಕ್ಷೆ ಚಂದ್ರಕಲಾ ಟಿವಿ ಬಾಬು, ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ವಿನಯ್, ಡಿವೈಎಸ್ಪಿ ನಂಜುಂಡೇಗೌಡ, ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧನಂಜಯ್ ಮತ್ತಿತರರಿದ್ದರು.
ಆಂಬುಲೆನ್ಸ್ ಚಾಲಕನಿಗೆ ಸನ್ಮಾನ: ಕರೊನಾ ಪ್ರಾರಂಭವಾದ ದಿನದಿಂದಲೂ ನಿರಂತರವಾಗಿ ಸೇವೆ ಸಲ್ಲಿಸಿರುತ್ತಿರುವ 108 ಆಂಬುಲೆನ್ಸ್ ಚಾಲಕ ರಾಜು ಅವರನ್ನು ಶಾಸಕ ಬಿ. ಶಿವಣ್ಣ ಹಾಗೂ ತಹಸೀಲ್ದಾರ್ ಮಹದೇವಯ್ಯ ಗೌರವಿಸಿದರು.
ಆಂಬುಲೆನ್ಸ್ ಕೊರತೆ ಇದ್ದಾಗ ಹಗಲು ರಾತ್ರಿ ನಿರಂತರವಾಗಿ ತಾಲೂಕು ವೈದ್ಯಾಧಿಕಾರಿಗಳು ಕರೆದ ಸಂದರ್ಭದಲ್ಲಿ ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಕೆಲಸವನ್ನು ರಾಜು ಮಾಡಿದ್ದರು. ಇದುವರೆಗೆ 800ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ರಾಜು ಕೇವಲ ಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿರಲಿಲ್ಲ. ಮಧ್ಯರಾತ್ರಿ, ಬೆಳಇನ ಜಾವ ಎನ್ನದೆ ಆಸ್ಪತ್ರೆಯಿಂದ ಕರೊನಾ ಸೋಂಕಿತರನ್ನು ಬೆಂಗಳೂರಿಗೆ ಅಥವಾ ಬೇರೆ ಬೇರೆ ಆಸ್ಪತ್ರೆಗಳಿಗೆ ಕಳುಹಿಸಲು ನೆರವಾಗಿದ್ದಾರೆ. ಇಂತಹ ಚಾಲಕರನ್ನು ಗುರುತಿಸಿದರೆ ಅವರಿಗೆ ಇನ್ನಷ್ಟು ಸೇವೆ ಸಲ್ಲಿಸಲು ಆಸಕ್ತಿ ಬರುತ್ತದೆ. ಡಾ.ವಿನಯ್, ತಾಲೂಕು ಆರೋಗ್ಯ ಅಧಿಕಾರಿ