ಸಮರ್ಥರಿಗೆ ಸಿಗುವುದೇ ರಂಗಾಯಣದ ಸಾರಥ್ಯ?

30 vikram 1
Published on

ವಿಕ್ರಮ ನಾಡಿಗೇರ ಧಾರವಾಡ
ಅತ್ಯಂತ ಕ್ರಿಯಾಶೀಲವಾಗಿ ನಿತ್ಯವೂ ರಂಗ ಚಟುವಟಿಕೆಗಳಿಂದ ಕೂಡಿರುತ್ತಿದ್ದ ರಂಗಾಯಣ ಆವರಣವೀಗ ಭಣಗುಡುತ್ತಿದೆ. ನಿರ್ದೇಶಕರ ಸ್ಥಾನ ತೆರವಾಗಿ ವರ್ಷಗಳೇ ಕಳೆದಿದ್ದರೂ ಸರ್ಕಾರ ಮಾತ್ರ ಹೊಸಬರ ಆಯ್ಕೆಗೆ ವಿಳಂಬ ನೀತಿ ಅನುಸರಿಸುತ್ತಿದೆ.
2019ರಲ್ಲಿ ರಂಗಾಯಣ ನಿರ್ದೇಶಕರಾಗಿ ರಮೇಶ ಪರವಿನಾಯ್ಕರ ಅಧಿಕಾರ ವಹಿಸಿಕೊಂಡಿದ್ದರು. 3 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ ಅವರ ಅವಧಿ 2022ರಲ್ಲಿ ರ್ಪೂಣಗೊಂಡಿತ್ತು. ಆ ಸಮಯದಲ್ಲಿ ಆಡಳಿತದಲ್ಲಿದ್ದ ಸರ್ಕಾರದ ಅವಧಿ ಸಹ ಕೆಲವೇ ತಿಂಗಳು ಉಳಿದಿತ್ತು. ಹೀಗಾಗಿ ನಿರ್ದೇಶಕರ ಆಯ್ಕೆಗೆ ಆಸಕ್ತಿ ವಹಿಸಿರಲಿಲ್ಲ. ಇದೀಗ ಹೊಸ ಸರ್ಕಾರ ಬಂದು ವರ್ಷಗಳಾದರೂ ನೇಮಕ ಆಗದಿರುವುದು ರಂಗಾಸಕ್ತರಲ್ಲಿ ಬೇಸರ ಮೂಡಿಸಿದೆ.
ನಿರ್ದೇಶಕರ ಸ್ಥಾನಕ್ಕೆ ರಂಗಸಮಾಜದಿಂದ ಈಗಾಗಲೇ ಮೂವರ ಹೆಸರುಗಳನ್ನು ಸೂಚಿಸಲಾಗಿದೆ. ಕೆಲ ತಿಂಗಳ ಹಿಂದೆ ಸಭೆಯಲ್ಲಿ ಧಾರವಾಡ ಮೂಲದ, ರಂಗ ಕಲಾವಿದೆ ವಿಶ್ವೇಶ್ವರಿ ಹಿರೇಮಠ, ಮಹದೇವ ಹಡಪದ ಹಾಗೂ ರಾಮದುರ್ಗನ ಮಂಜುನಾಥ ಬಡಿಗೇರ ಹೆಸರನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಮಹದೇವ ಹಡಪದ ಪತ್ನಿ ಈಗಾಗಲೇ ಅಕಾಡೆಮಿಯೊಂದರ ಸದಸ್ಯರಾದ ಕಾರಣ ಸರ್ಕಾರ ಅವರ ಹೆಸರನ್ನು ಪುರಸ್ಕರಿಸಿಲ್ಲ ಎಂಬ ಮಾತಿದೆ. ಇದರ ಮಧ್ಯೆ ರಂಗಕರ್ಮಿ ವಿಠ್ಠಲ ಕೊಪ್ಪದ ಹೆಸರೂ ಕೇಳಿ ಬರುತ್ತಿದೆ.
ರಂಗ ಸಮಾಜ ಹೆಸರು ನೀಡಿದ ಕೆಲ ದಿನಗಳಲ್ಲೇ ಸರ್ಕಾರ ಆದೇಶ ಹೊರಡಿಸಿದ್ದರೆ ಹೊಸ ನಿರ್ದೇಶಕರ ಆಯ್ಕೆ ಮಾಡಿ ತಿಂಗಳಾಗುತ್ತಿತ್ತು. ಆದರೆ ಸರ್ಕಾರ ಮಾತ್ರ ಇನ್ನೂ ಮೀನಮೇಷ ಎಣಿಸುತ್ತಿದೆ. ಇದೇ ಕಾರಣದಿಂದ ರಂಗ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ಇಡೀ ರಂಗಾಯಣ ಆವರಣ ಬಿಕೋ ಎನ್ನುವಂತಾಗಿದೆ.
ರಂಗಾಯಣ ನಿರ್ದೇಶಕರ ಆಯ್ಕೆಗೆ ಸರ್ಕಾರಗಳು ಪ್ರತಿ ಬಾರಿ ವಿಳಂಬ ನೀತಿ ಅನುಸರಿಸುತ್ತಿವೆ. ಈ ಹಿಂದೆ ನಿರ್ದೇಶಕರಾಗಿದ್ದ ನಟರಾಜ ಏಣಗಿ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಹಾಗೂ ಸುಭಾಷ ನರೇಂದ್ರ ಅವಧಿ ಮುಗಿದಾಗಲೂ ಇದೇ ರೀತಿ ವಿಳಂಬ ನೀತಿ ಅನುಸರಿಸಿತ್ತು. ಈಗಲೂ ಅದೇ ಸಮಸ್ಯೆಯಾಗಿದೆ.
ಹೊಸ ನಿರ್ದೇಶಕರ ನೇಮಕ ವಿಚಾರ ನೆನೆಗುದಿಗೆ ಬಿದ್ದಿರುವುದು ರಂಗಾಸಕ್ತರಲ್ಲಿ ಬೇಸರ ಮೂಡಿಸಿದೆ. ಒಟ್ಟಿನಲ್ಲಿ ಆಗಸ್ಟ್​ನಲ್ಲಿ ರಂಗಾಯಣಕ್ಕೆ ಹೊಸ ಸಾರಥ್ಯ ಸಿಗುವುದಂತೂ ನಿಶ್ಚಿತವಾದಂತಾಗಿದೆ.
ವಿಶ್ವೇಶ್ವರಿ ಹೆಸರು ಮುಂಚೂಣಿಯಲ್ಲಿ: ರಂಗ ಸಮಾಜ ನೀಡಿರುವ ಹೆಸರುಗಳ ಪೈಕಿ ಧಾರವಾಡದ ವಿಶ್ವೇಶ್ವರಿ ಹಿರೇಮಠ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ. ವಿಶ್ವೇಶ್ವರಿ ಅವರು ನೀನಾಸಂ ಪದವಿ ಪಡೆದಿದ್ದು, ರಾಜ್ಯಾದ್ಯಂತ ರಂಗ ಶಿಬಿರಗಳನ್ನು ನಡೆಸಿದ ಅನುಭವ ಹೊಂದಿದ್ದಾರೆ. ಅನುಭವಿಗಳು ಹಾಗೂ ಸ್ಥಳಿಯರನ್ನು ನೇಮಕ ಮಾಡಿದಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸಿ ರಂಗಾಯಣ ಮುನ್ನಡೆಸಲು ಸಾಧ್ಯ ಎಂಬುದನ್ನು ಮನಗಂಡು ಇವರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಇವೆಲ್ಲದರ ನಡುವೆ ಬೇರೊಬ್ಬರು ಆಯ್ಕೆಯಾದರೂ ಆಶ್ಚರ್ಯವಿಲ್ಲ. ರಂಗ ಸಮಾಜ ಕಳುಹಿಸಿದ ಹೆಸರುಗಳನ್ನು ಹೊರತುಪಡಿಸಿ ಬೇರೊಬ್ಬರನ್ನು ಆಯ್ಕೆ ಮಾಡಿದ ಉದಾಹರಣೆಗಳೂ ಇವೆ. ಹೀಗಾಗಿ ನಿರ್ದೇಶಕರ ಆಯ್ಕೆ ದಿನೇ ದಿನೇ ಕುತೂಹಲ ಹೆಚ್ಚಿಸಿದೆ.
ಸಮರ್ಥರಿಗೆ ಸಿಗುವುದೇ ಅವಕಾಶ?: ಸರ್ಕಾರಗಳು ವಿವಿಧ ನಿಗಮ ಮಂಡಳಿ, ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಂತೆಯೇ ರಂಗಾಯಣಕ್ಕೆ ನಿರ್ದೇಶಕರನ್ನು ಆಯ್ಕೆ ಮಾಡುವ ಪದ್ಧತಿ ರೂಢಿಸಿಕೊಂಡಿವೆ. ಹೀಗಾಗಿ ರಂಗ ಕ್ಷೇತ್ರದ ಪರಿಣಿತರನ್ನು ಆಯ್ಕೆ ಮಾಡುವ ಬದಲು ಅಲ್ಪ ಜ್ಞಾನ ಹೊಂದಿದ, ಲಾಭಿ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುವ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡುತ್ತಿವೆ. ಇದು ರಂಗಾಸಕ್ತರ ಬೇಸರಕ್ಕೂ ಕಾರಣವಾಗಿದೆ. ಇದರಿಂದ ರಂಗ ಚಟುವಟಿಕೆಗಳಿಗೂ ಹಿನ್ನಡೆಯಾಗಲಿದೆ. ಹೀಗಾಗಿ ಈ ಬಾರಿಯಾದರೂ ಹಿರಿ ತಲೆಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ದೇಶಕರನ್ನು ಆಯ್ಕೆ ಮಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ 6 ರಂಗಾಯಣಗಳಿಗೆ ತಲಾ ಮೂವರಂತೆ ಒಟ್ಟು 18 ಜನರ ಹೆಸರನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರವೇ ಅಂತಿಮ ಆದೇಶ ಹೊರಡಿಸಲಿದೆ.*ಮಹಾಂತೇಶ ಗಜೇಂದ್ರಗಡ, ರಂಗ ಸಮಾಜದ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net