145 ಹಳ್ಳಿಗಳಿಗೆ ‘ಬರ’ಬಹುದು

BARAAA
Published on

ಹಾವೇರಿ: ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ಬಹುತೇಕ ಜಲಮೂಲಗಳಾದ ನದಿ, ಕೆರೆಗಳು ಬತ್ತುತ್ತಿವೆ. ನಾಲ್ಕೈದು ವರ್ಷಗಳಿಂದ ಏರುಗತಿಯಲ್ಲಿದ್ದ ಅಂತರ್ಜಲ ದಿಢೀರ್ ಕುಸಿತ ಕಂಡಿದೆ. ಪರಿಣಾಮ ಜಿಲ್ಲೆಯ ಹಲವು ನಗರ, ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ನಡುವೆ ಜಿಲ್ಲೆಯ 145 ಹಳ್ಳಿಗಳಿಗೆ ಬರದ ಭೀತಿ ಎದುರಾಗಿದೆ.
ಕಳೆದ ಹಲವು ತಿಂಗ ಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಯಾಗಿಲ್ಲ. ಎರಡು ತಿಂಗಳಿಂದ ಬಿಸಿ ಲಿನ ಪ್ರಖರತೆ ಹೆಚ್ಚಾಗಿದ್ದು, ತಾಪ ಮಾನ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ವರದಿಯಾಗಿದೆ. ಇದರಿಂದಾಗಿ ಜಿಲ್ಲೆಯ ವರದಾ, ತುಂಗಭದ್ರಾ ಸೇರಿದಂತೆ ಅನೇಕ ಕೆರೆ, ಕಟ್ಟೆಗಳು ಬರಿದಾಗಿವೆ. ಕೆಲವೆಡೆ ಬೋರ್‌ವೆಲ್‌ಗಳಲ್ಲೂ ನೀರು ಬರುತ್ತಿಲ್ಲ. ಈ ಮೂಲವನ್ನೇ ನಂಬಿದ್ದ ನಗರಗಳು, ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಅನೇಕ ಕಡೆಗಳಲ್ಲಿ 15, 20, 25 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಮುಂಗಾರು ಮಳೆಯ ಮಾನ್ಸೂನ್ ಕೂಡ ತಡವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಮಳೆಯೂ ಕೈಕೊಟ್ಟಿದ್ದೇ ಆದಲ್ಲಿ ಪರಿಸ್ಥಿತಿ ಭೀಕರವಾಗಲಿದೆ. ಈ ನಿಟ್ಟಿನಲ್ಲೂ ಜಿಲ್ಲಾಡಳಿತ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕಿದೆ. 145 ಗ್ರಾಮಗಳಲ್ಲಿ ಬರ ಉದ್ಬವಿಸಬಹುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪಟ್ಟಿ ಸಿದ್ಧಪಡಿಸಿದೆ. ಬ್ಯಾಡಗಿ ತಾಲೂಕಿನ 20 ಹಳ್ಳಿಗಳು, ಹಾನಗಲ್ಲನ 31 ಗ್ರಾಮ, ಹಾವೇರಿಯ 25 ಗ್ರಾಮ, ಹಿರೇಕೆರೂರನ 27 ಗ್ರಾಮ, ರಟ್ಟಿಹಳ್ಳಿಯ 12, ರಾಣೆಬೆನ್ನೂರಿನ 11, ಸವಣೂರಿನ 6 ಹಾಗೂ ಶಿಗ್ಗಾಂವಿಯ 13 ಗ್ರಾಮಗಳಲ್ಲಿ ಬರ ಉಂಟಾಗುವ ಮುನ್ಸೂಚನೆ ಇದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 17 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಅದರಿಂದಲೂ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಜಯರಾಮ ನಾಯಕ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ನಾಲ್ಕೈದು ವರ್ಷಗಳ ಸ್ಥಿತಿಗತಿ ಆಧರಿಸಿ ಜಿಲ್ಲೆಯ 145 ಗ್ರಾಮಗಳಲ್ಲಿ ಬರ ಎದುರಾಗಬಹುದು ಎಂದು ಅಂದಾಜು ಪಟ್ಟಿ ನಿದ್ಧಪಡಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು 17 ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು.I ಜಯರಾಮ ನಾಯಕಕಾರ್ಯನಿರ್ವಾಹಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ನದಿಗಳು, ಬೋರ್‌ವೆಲ್‌ಗಳಲ್ಲಿ ನೀರು ಬರಿದಾಗುತ್ತಿದೆ. ಇದರಿಂದ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಅಡಕೆ, ತೆಂಗು ಇತರ ಬೆಳೆಗಳು ಒಣಗುತ್ತಿವೆ. ಆಡಳಿತ ವರ್ಗ ಬರ ಎದುರಾದಾಗ ಮಾತ್ರ ಜಲಸಂರಕ್ಷಣೆಯ ಮಂತ್ರ ಜಪಿಸದೇ ಮಳೆಗಾಲದಲ್ಲಿ ಪರಿಣಾಮಕಾರಿಯಾಗಿ ಜಲಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು.I ವಿಜಯಕುಮಾರ ಗೊಡಚಿ ಹಾವೇರಿ ನಿವಾಸಿ ಹಾವೇರಿ ತಾಲೂಕು ಕುರುಬಗೊಂಡ ಗ್ರಾಮದಲ್ಲೂ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಹೆಚ್ಚುವರಿಯಾಗಿ ಎರಡು ಬೋರ್‌ವೆಲ್ ಕೊರೆಸುವಂತೆ ಬ್ಯಾಡಗಿ ಶಾಸಕರಿಗೆ ಮನವಿ ಮಾಡಲಾಗಿದೆ.I ಹೇಮಾವತಿ ಹಾವೇರಿಕುರುಬಗೊಂಡ ಗ್ರಾಪಂ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net