ಆಧ್ಮಾತ್ಮಿಕ ಜ್ಞಾನದಿಂದ ಕರೊನಾ ಮಹಾಮಾರಿ ದೂರ

Corona
Published on

ಹುಬ್ಬಳ್ಳಿ: ಕರೊನಾ ಮಹಾಮಾರಿ ಮಾನವ ಕುಲದ ನಿದ್ದೆಗೆಡಿಸಿದೆ. ಆತಂಕವಾದ, ಪರಿಸರ ವಿರೋಧಿ ಚಟುವಟಿಕೆಗಳು ಮಾನವ ಕುಲಕ್ಕೆ ಧಕ್ಕೆಯಾಗಿವೆ. ಇವುಗಳ ನಿವಾರಣೆಗೆ ಆಧ್ಯಾತ್ಮಿಕ ಜ್ಞಾನದ ಅಗತ್ಯವಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದರು.

ಗಣಧರಾಚಾರ್ಯ ಭಾರತ ಗೌರವ ಶ್ರೀ ಕುಂಥುಸಾಗರ ಮಹಾರಾಜರ ಅಮೃತ ಮಹೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿ ಮಾತನಾಡಿ, ಧರ್ಮ ಮತ್ತು ಆಧ್ಯಾತ್ಮಿಕತೆಯಿಂದ ಜನರ ಜೀವನ ಬದಲಿಸುವ ಕೆಲಸವನ್ನು ಮುನಿಗಳು ಮಾಡುತ್ತಿದ್ದಾರೆ ಎಂದರು. ಆಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು ವಿಶ್ವದಿಂದ ಅಜ್ಞಾನದ ಅಂಧಕಾರ ತೊಲಗಿಸಲು ಪ್ರಯತ್ನಿಸಿದ್ದಾರೆ. ಸಮಾಜದಲ್ಲಿ ಸದ್ಗುಣಗಳ ಪ್ರಸಾರಕ್ಕೆ ಜೀವನ ಮುಡುಪಾಗಿಟ್ಟಿದ್ದಾರೆ ಎಂದು ಹೇಳಿದರು.

ಜಗದ್ಗುರು ಅಭಿನಂದನಾ ಪತ್ರ ಸ್ವೀಕರಿಸಿ ಆಶೀರ್ವಚನ ನೀಡಿದ ಗಣಧರಾಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು, ಸಂಯಮ ಇದ್ದಲ್ಲಿ ಸುಖ ಇದೆ. ಧರ್ಮದ ಪ್ರಾಪ್ತಿ ಸಂಯಮದಿಂದ ಸಿಗುತ್ತದೆ. ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಸುಖ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು. 2020ರಲ್ಲಿ ಮಹಾಮಾರಿ ಕರೊನಾದಿಂದ ಜನ ಆತಂಕಕ್ಕೊಳಗಾದರು. ವಿಶ್ವದ ಜನರಲ್ಲಿ ಭಯ, ಆತಂಕ ಆವರಿಸಿತ್ತು. ಈ ಆತಂಕ ಹಾಗೂ ರೋಗ ದೂರವಾಗಬೇಕಾದರೆ ಜನರು ಧರ್ಮದ ಪಾಲನೆ ಮಾಡಬೇಕು. ಅಹಿಂಸೆ, ಜೀವದಯಾ, ಸತ್ಯ, ಶಾಖಾಹಾರ, ಸಂಯಮವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.

ಯೋಗಗುರು ಬಾಬಾ ರಾಮದೇವ ಮಾತನಾಡಿ, ಕುಂಥುಸಾಗರ ಮಹಾರಾಜರು ಕೇವಲ ಜೈನ ಸಮಾಜಕ್ಕೆ ಸೀಮಿತರಾಗಿಲ್ಲ. ಅವರು ಇಡೀ ಮಾನವ ಕುಲದ ಮಾರ್ಗದರ್ಶಕರು. ಲೋಕಕಲ್ಯಾಣಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ ಎಂದರು.

ಜೀವನದಲ್ಲಿ ಶಾಂತಿ ಹಾಗೂ ಸಮೃದ್ಧಿ ಪಡೆಯಬೇಕಾದರೆ ಧರ್ಮದ ಮಾರ್ಗದಲ್ಲಿ ನಡೆಯುವ ಅಗತ್ಯವಿದೆ ಎಂದ ಆರ್ಟ್ ಆಫ್ ಲೀವಿಂಗ್​ನ ಶ್ರೀ ಶ್ರೀ ರವಿಶಂಕರ ಗುರೂಜಿ, ಇಡಿ ವಿಶ್ವ ಕರೊನಾದಿಂದ ತತ್ತರಿಸಿದೆ. ಈ ರೋಗದಿಂದ ಮುಕ್ತರಾಗಬೇಕಾದರೆ ಸಂಯಮ ಬೇಕು. ಸೇವೆ, ಸಾಧನೆ, ಸತ್ಸಂಗ ಜೀವನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆಚಾರ್ಯ ಡಾ. ಲೋಕೇಶ ಮುನಿ, ಸಾಧಿ್ವ ರಿತಂಬರಾ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಆಧ್ಯಾತ್ಮಿಕ ಚಿಂತಕಿ ಬಿ.ಕೆ. ಶಿವಾನಿ, ಶ್ರೀ ವಿಜಯರತ್ನ ಸುಂದರ ಮಹಾರಾಜರು, ರಾಷ್ಟ್ರಸಂತ ಶ್ರೀ ಲಲಿತಪ್ರಭ ಗುರುದೇವ ಹಾಗೂ ಇತರರು ಮಾತನಾಡಿ, ಧರ್ಮದ ಮಾರ್ಗದಲ್ಲಿ ಬದುಕುವಂತೆ ತಿಳಿಸಿದರು.

ವರೂರು ನವಗ್ರಹ ತೀರ್ಥದ ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಹಾಗೂ ಸಾರಸ್ವತಾಚಾರ್ಯ ಶ್ರೀ ದೇವನಂದಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಆಚಾರ್ಯ ಗುಪ್ತಿನಂದಿ ಮಹಾರಾಜರು, ಆಚಾರ್ಯ ಅಂಕೇತ ಸಾಗರ ಮಹಾರಾಜರು, ಆಚಾರ್ಯ ಶ್ರೀ ವೈರಾಗ್ಯಾನಂದ ಮಹಾರಾಜರು, ಭಿಕ್ಷು ಸೇನಾನಿ, ದೀಪಾಂಕರ ಸ್ವಾಮೀಜಿ, ಆಚಾರ್ಯ ಸಾಮ್ರಾಟ ಡಾ. ಶಿವಮುನಿ, ರಾಷ್ಟ್ರಸಂತ ಶ್ರೀ ಲಲಿತಪ್ರಭ, ಚಂದ್ರಪ್ರಭ ಮಹಾರಾಜರು ಮತ್ತಿತರರು ಇದ್ದರು.

ಆಶೀರ್ವಚನ

ಗಣಧರಾಚಾರ್ಯ ಭಾರತ ಗೌರವ ಶ್ರೀ ಕುಂಥುಸಾಗರ ಮಹಾರಾಜರ ಅಮೃತ ಮಹೋತ್ಸವ ಅಂಗವಾಗಿ ಜ. 1ರಂದು ಮ. 12 ರಿಂದ ಸ. 5ರವರೆಗೆ ಜೈನ ಸನ್ಯಾಸಿಗಳು ಆಶೀರ್ವಚನ, ಸಂದೇಶ ನೀಡುವರು.

ವೆಬಿನಾರ್ ಸಂಪರ್ಕ

ನವಗ್ರಹ ತೀರ್ಥ ಚಾನೆಲ್ ಜೂಮ್ ವಿಳಾಸ : 570 988 7799 (ಪಾಸ್ ವರ್ಡ್ : 1008).

ಧರ್ಮತೀರ್ಥ ಚಾನೆಲ್ ಜೂಮ್ ವಿಳಾಸ: 219 255 1569 (ಪಾಸ್​ವರ್ಡ್ :1008 )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net