ಕ್ಯಾಂಪಸ್ ಆಯ್ಕೆ ಕಾನೂನು ಅಂಗಳಕ್ಕೂ ಕಾಲಿಟ್ಟಿದೆ

mysore
Published on

ಮೈಸೂರು; ಈಗ ಕ್ಯಾಂಪಸ್ ಆಯ್ಕೆ ಎನ್ನುವುದು ಕಾನೂನು ಕಾಲೇಜು, ಕಾನೂನು ವಿಶ್ವವಿದ್ಯಾಲಯಗಳ ಅಂಗಳಕ್ಕೂ ಕಾಲಿಟ್ಟಿದೆ ಎಂದು ರಾಜ್ಯ ಸರ್ಕಾರದ ಕಾನೂನು ವಿಭಾಗದ ವಿಶೇಷ ಕಾರ್ಯದರ್ಶಿ ಎಚ್.ಕೆ.ಜಗದೀಶ್ ಹೇಳಿದರು


ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಯಾಂಪಸ್ ಆಯ್ಕೆ ಎನ್ನುವುದು ಇಷ್ಟು ದಿನ ಬರೀ ಇಂಜಿನಿಯರಿಂಗ್ ಕೋರ್ಸಿಗೆ ಮಾತ್ರ ಅನ್ವಯಿಸುತ್ತಿತ್ತು. ಇದೀಗ ಕಾನೂನು ವಿಷಯಕ್ಕೂ ಬಂದಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳಿಗೆ ಈಗ ಎಲ್ಲಿಲ್ಲದ ಬೇಡಿಕೆಯಿದೆ ಎಂದು ಹೇಳಿದರು.


70-80ರ ದಶಕಗಳಲ್ಲಿ ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಕಾನೂನು ವೃತ್ತಿ ಮತ್ತು ಕಾನೂನು ವ್ಯಾಸಂಗಕ್ಕೆ ಈಗ ಎಲ್ಲ ವೃತ್ತಿಪರ ಶಿಕ್ಷಣಗಳಿಗಿಂತಲೂ ಮಹತ್ವದ ಸ್ಥಾನ ಪಡೆದಿದೆ. ಮೂರ್ನಾಲ್ಕು ದಶಕಗಳ ಹಿಂದೆ ಕನ್ನಡದಲ್ಲಿ ಕಾನೂನು ವ್ಯಾಸಂಗ ಅಸಾಧ್ಯ ಅನ್ನುವ ಪರಿಸ್ಥಿತಿಗಳು ಇದ್ದವು. ಆದರೆ, ಈಗ ಕಾನೂನಿನ ಅತ್ಯಂತ ಕಠಿಣ ವಿಷಯಗಳನ್ನು ಕನ್ನಡದಲ್ಲೇ ಓದುವ ಸವಲತ್ತುಗಳು ನಿರ್ಮಾಣಗೊಂಡಿವೆ ಎಂದರು.


ಕನ್ನಡದಲ್ಲಿ ಕಾನೂನು ಓದುವ ವಿದ್ಯಾರ್ಥಿಗಳು ಕೀಳರಿಮೆಯಿಂದ ನರಳಬೇಕಿಲ್ಲ. ಇವತ್ತು ನ್ಯಾಯವಾದಿಗಳ ವೃತ್ತಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳೇ. ಅದರಲ್ಲೂ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳ ಎನ್ನುವುದು ಹೆಮ್ಮೆ ಪಡಲೇಬೇಕಾದ ಸಂಗತಿ ಎಂದರು.


ರಾಜ್ಯದ ಯಾವ ಕಾನೂನು ಕಾಲೇಜುಗಳು ಮೂಲ ಸೌಕರ್ಯಗಳಿಲ್ಲದೆ ಪರಿತಪಿಸುತ್ತಿಲ್ಲ. ದೇಶದ ಅತ್ಯುನ್ನತ ಕಾನೂನು ಕಾಲೇಜುಗಳು ಹಾಗೂ ದೇಶದ ಏಕೈಕ ಕಾನೂನು ವಿಶ್ವವಿದ್ಯಾಲಯ ಇರುವುದು ಕರ್ನಾಟಕದಲ್ಲೇ. ಶಿಕ್ಷಕರಿಲ್ಲದೆ, ಗ್ರಂಥಾಲಯವಿಲ್ಲದ, ವಿಚಾರ ಸಂಕಿರಣಗಳಿಲ್ಲದ ಸಂದರ್ಭದಲ್ಲಿ ಓದಿದ ನನ್ನಂತಹ ಗ್ರಾಮಾಂತರ ವಿದ್ಯಾರ್ಥಿ ನ್ಯಾಯಾಧೀಶನಾಗಬಹುದಾದರೆ ಎಲ್ಲ ಸೌಕರ್ಯಗಳನ್ನು ಪಡೆದು ಓದುತ್ತಿರುವ ನೀವು ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ ಎಂದು ಕಿವಿಮಾತು ಹೇಳಿದರು.


ಎಲ್ಲೂ ಸಲ್ಲದವರು ಇಲ್ಲಿ ಸಲ್ಲುವರಯ್ಯ ಎಂದು ಕಾನೂನು ಓದಲು ಬಂದ ವಿದ್ಯಾರ್ಥಿಗಳನ್ನು ಹೀಗಳೆಯುತ್ತಿದ್ದುದು ಉಂಟು. ಆದರೆ, ಈಗ ಇಲ್ಲಿ ಸಲ್ಲುವವರು ಎಲ್ಲೆಡೆಯೂ ಸಲ್ಲುವರಯ್ಯ ಎಂಬ ಹೊಸ ನುಡಿಗಟ್ಟು ಹುಟ್ಟಿಕೊಂಡಿದೆ ಎಂದರು.


ಭಾರತದ ಸ್ವಾತಂತ್ರ್ಯ ಆಂದೋಲನವನ್ನು ಮುನ್ನಡೆಸಿದ್ದು ಹಾಗೂ ಸ್ವಾತಂತ್ರ್ಯೋತ್ತರ ಆಧುನಿಕ ಭಾರತವನ್ನು ಕಟ್ಟಿದ್ದು ಕಾನೂನು ಓದಿದ ನಾಯಕರೇ. ಭಾರತದ ಬಹುಮುಖ್ಯ ರಾಷ್ಟ್ರ ನಾಯಕರೆಲ್ಲ ಕಾನೂನು ಓದಿ ನ್ಯಾಯವಾದಿಗಳಾದವರೇ. ಕಾನೂನು ವ್ಯಾಸಂಗದೆಡೆಗೆ ನಿರ್ಲಕ್ಷೃತೆ ತೋರುತ್ತಿದ್ದವರೆ ಈಗ ಇದರೆಡೆಗೆ ತಮ್ಮ ಬೆರಗುಗಣ್ಣುಗಳಿಂದ ನೋಡುತ್ತಿದ್ದಾರೆ. ಇದು ಈ ದೇಶದಲ್ಲಿ ಕಾನೂನು ಶಿಕ್ಷಣ ಸಾಧಿಸಿದ ಜಯ ಎಂದು ಬಣ್ಣಿಸಿದರು.


ಭಾರತದಲ್ಲಿ ಸಂವಿಧಾನವೇ ಪವಿತ್ರ, ಸಂವಿಧಾನವೇ ಅಂತಿಮ. ಯಾವ ಕಾರಣಕ್ಕೂ ನಮ್ಮ ದೇಶದ ಕಾಯ್ದೆ, ಕಾನೂನುಗಳು ಅಸಂವಿಧಾನಿಕಯೂ ಅಮಾನವೀಯವಾಗಿಯೂ ಇರಲು ಸಾಧ್ಯವಿಲ್ಲ. ನಮ್ಮ ದೇಶ ನಿಂತಿರುವುದೇ ಭಾರತ ಸಂವಿಧಾನದ ಮನೋಧರ್ಮದ ಮೇಲೆ. ಭಾರತ ಸಂವಿಧಾನದ ಮೂರು ಮುಖ್ಯ ಅಂಗಗಳಾದ ಶಾಸಕಾಂಗ, ಕಾಯಾರ್ಂಗ ಮತ್ತು ನ್ಯಾಯಾಂಗ ಯಾವುದೇ ಬಿಕ್ಕಟ್ಟು ತಗಾದೆಗಳಿಲ್ಲದೆ ಸಾಮರಸ್ಯದಿಂದಿರಲು ಬಹುಮುಖ್ಯ ಕಾರಣವೇ ನಮ್ಮ ಸಂವಿಧಾನ ಎಂದು ಹೇಳಿದರು.


ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿ, ಕಾನೂನು ವ್ಯಾಸಂಗಕ್ಕೆ ಈ ತಲೆಮಾರಿನ ಯುವಜನತೆ ಆಸಕ್ತಿ ತೋರುವುದು ಹೆಮ್ಮೆಪಡುವಂತದ್ದು. ಮೆಡಿಕಲ್, ಇಂಜಿನಿಯರಿಂಗ್ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದ ವಿದ್ಯಾರ್ಥಿಗಳು ಈಗ ಕಾನೂನು ಕಲಿಯಲು ಬರುತ್ತಿದ್ದಾರೆ.

ಸ್ವಾತಂತ್ರ್ಯೋತ್ತರದ ಮೊದಲ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚು ಕಾನೂನು ಕಾಲೇಜುಗಳು ಇರಲಿಲ್ಲ. ಆಗ ಕರ್ನಾಟಕದ ಬಹುತೇಕ ವಿದ್ಯಾರ್ಥಿಗಳು ದಿಲ್ಲಿ, ಪುಣೆ, ಮಹಾರಾಷ್ಟ್ರಗಳಲ್ಲಿ ಕಲಿಯಲು ಹೋಗುತ್ತಿದ್ದರು. ಆದರೆ. ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ರಾಜ್ಯದಲ್ಲೇ ನೂರಕ್ಕೂ ಹೆಚ್ಚು ಕಾನೂನು ಕಾಲೇಜುಗಳು, 10ಕ್ಕೂ ಹೆಚ್ಚಿನ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಕಾನೂನು ಕಲಿಕೆಗೆ ಅವಕಾಶವಿದೆ. ಕಾನೂನು ಓದಿಗೆ ಕರ್ನಾಟಕ ಇಡೀ ದೇಶದಲ್ಲಿಯೇ ಮಾದರಿ ರಾಜ್ಯವಾಗಿದೆ. ಪಿಯುಸಿ, ಡಿಗ್ರಿಗಳಲ್ಲಿ 70, 90 ಅಂಕ ಪಡೆದರೂ ಸರ್ಕಾರಿ, ಖಾಸಗಿ ಕಾನೂನು ಕಾಲೇಜುಗಳಲ್ಲಿ ಸೀಟು ಸಿಗುವುದು ಕಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.


ವಿದ್ಯಾವರ್ಧಕ ಸಂಘದ ಖಜಾಂಚಿ ಶ್ರೀಶೈಲ ರಾಮಣ್ಣವರ್, ಆಡಳಿತ ಮಂಡಳಿ ಸದಸ್ಯ ಶಿವಲಿಂಗಯ್ಯ, ಪ್ರಾಂಶುಪಾಲೆ ಡಾ.ಪಿ.ದೀಪು, ಕಾನೂನು ಅಧ್ಯಯನದ ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ, ಸಹಾಯಕ ಪ್ರಾಧ್ಯಾಪಕರಾದ ಎಂ.ಜೆ.ಇಂಧುಮತಿ, ಡಾ.ಎ.ಆರ್.ಪ್ರಕೃತಿ, ಆಯೋಜಕ ಡಾ.ಕೆ.ಎಲ್.ಚಂದ್ರಶೇಖರ್ ಐಜೂರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net