ಮಂಗಳೂರು ವಿವಿಯಲ್ಲಿ 103 ಪಕ್ಷಿ ಪ್ರಭೇದ

bird new
Published on

ಭರತ್ ಶೆಟ್ಟಿಗಾರ್ ಮಂಗಳೂರು

ಕ್ಯಾಂಪಸ್ ಬರ್ಡ್ ಕೌಂಟ್ ಸ್ಪರ್ಧೆ ಭಾಗವಾಗಿ ಮಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ಒಟ್ಟು 103 ಪಕ್ಷಿ ಪ್ರಭೇದಗಳನ್ನು ಗುರುತಿಸಿದ್ದಾರೆ.

ಬರ್ಡ್ ಕೌಂಟ್ ಇಂಡಿಯಾ ಸಂಸ್ಥೆಯ ಸ್ಪರ್ಧೆಯಲ್ಲಿ ಮಂಗಳೂರು ವಿವಿ ಭಾಗವಹಿಸುತ್ತಿರುವುದು 5ನೇ ಬಾರಿ. ಸ್ಪರ್ಧೆಯ ಭಾಗವಾಗಿ ಫೆ.14-17ರ ವರೆಗೆ ದೇಶದ ವಿವಿಧ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಹಕ್ಕಿಗಳನ್ನು ಲೆಕ್ಕ ಹಾಕಲಾಗಿದೆ. ಮಂಗಳೂರು ವಿವಿಯ 300 ಎಕರೆ ಪ್ರದೇಶವನ್ನು ಸುತ್ತಿದ ಪಕ್ಷಿ ಪ್ರಿಯ ವಿದ್ಯಾರ್ಥಿಗಳು ಸಂಸ್ಥೆಗೆ ಪಕ್ಷಿಗಳ ಚಿತ್ರ ಸಹಿತ ದಾಖಲೆ ಕಳುಹಿಸಿದ್ದಾರೆ.

ಪತ್ತೆಯಾಗಿರುವ ಪಕ್ಷಿಗಳು: ಬೂದು ಕಾಜಾಣ(ಆ್ಯಶೀ ಡ್ರಾಂಗೋ), ಬೂಟುಗಾಲಿನ ಗಿಡುಗ(ಬೂಟೆಡ್ ಈಗಲ್), ನವರಂಗ(ಇಂಡಿಯರ್ ಪಿಟ್ಟ) ಮೊದಲಾದ ವಲಸೆ ಹಕ್ಕಿಗಳು, ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಕಂದು ತಲೆಯ ಬುಲ್‌ಬುಲ್, ರೂಫೋಸ್ ಬಬ್ಲರ್, ಕಂದು ಕಾಡು ಗೂಬೆ (ಬ್ರೌನ್ ವುಡ್ ಔಲ್), ಬಾರ್ನ್ ಔಲ್, ಸ್ಪಾಟೆಡ್ ಔಲೆಟ್, ಸವನ್ನಾ-ಭಾರತ ಮತ್ತು ಜೋರ್ಡನ್‌ನ ನೈಟ್‌ಜಾರ್ಸ್‌, ಅಪರೂಪದ ಶ್ರೀಲಂಕಾದ ಕಪ್ಪೆಬಾಯಿ(ಶ್ರೀಲಂಕನ್ ಫ್ರಾಗ್ ಮೌತ್) ಹಕ್ಕಿ, ನೀಲಿ ಕಿವಿಯ ಮಿಂಚುಳ್ಳಿ ಮತ್ತು ಬೂದು ಹೊಟ್ಟೆಯ ಕುಕೂ ಕ್ಯಾಂಪಸ್‌ನಲ್ಲಿ ಮೊದಲ ಬಾರಿಗೆ ಕಂಡು ಬಂದಿದೆ. ಎಲ್ಲೆಡೆ ಕಂಡು ಬರುವ ಕಪ್ಪು ಕಾಜಾಣ(ಬ್ಲಾೃಕ್ ಡ್ರೊಂಗೊ), ಗರುಡ(ಬ್ಲಾೃಕ್ ಕೈಟ್), ಬಿಳಿ ಗರುಡ(ಬ್ರಾಹ್ಮಿನಿ ಕೈಟ್), ಗ್ರೀನ್ ವಾರ್ಲ್ಬರ್, ಖಗರತ್ನ (ಪರ್ಪಲ್ ರಂಪ್‌ಡ್ ಸನ್ ಬರ್ಡ್) ಪಕ್ಷಿಗಳು ಪತ್ತೆಯಾಗಿವೆ. ಕಾಗೆ ಗೂಡು, ಚಿಟ್ಟು ಮಡಿವಾಳ(ಇಂಡಿಯನ್ ರಾಬಿನ್) ಗೂಡು ಮತ್ತು ಮೊಟ್ಟೆಗಳು, ಗೂಡು ಕಟ್ಟುತ್ತಿರುವ ಕಂಚು ಕಾಜಾಣ, ಡೇಗೆ (ದ್ರೋಣಕ-ಶಿಕ್ರಾ) ಗೂಡು ಕಟ್ಟಲು ಕಡ್ಡಿಗಳನ್ನು ತೆಗೆದುಕೊಂಡು ಹೋಗುವ ವೇಳೆ ಪತ್ತೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಾಣಸಿಕ್ಕ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿದೆ. 2016ರಲ್ಲಿ 77, 2017ರಲ್ಲಿ 95, 2018ರಲ್ಲಿ 110 ಹಾಗೂ 2019ರಲ್ಲಿ 107 ಪ್ರಭೇದದ ಪಕ್ಷಿಗಳು ಪತ್ತೆಯಾಗಿದ್ದವು. 2018ರಲ್ಲಿ ಹಕ್ಕಿ ವೈವಿಧ್ಯತೆಯಲ್ಲಿ ವಿವಿ ಕ್ಯಾಂಪಸ್ ದೇಶದಲ್ಲಿಯೇ 5ನೇ ಸ್ಥಾನ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿತ್ತು.

60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ: ದೇಶದ ಸಂರಕ್ಷಿತ ಅರಣ್ಯಗಳ ಹೊರಗಿನ ಪಕ್ಷಿ ಸಂಕುಲದ ಬಗ್ಗೆ ಅರಿವು ಮೂಡಿಸುವುದೇ ಬರ್ಡ್ ಕೌಂಟ್ ಉದ್ದೇಶ. ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ವಿವೇಕ್ ಹಾಸ್ಯಗಾರ್ ಮತ್ತು ಸಾಗರ ಭೂ ವಿಜ್ಞಾನ ವಿಭಾಗದ ಮ್ಯಾಕ್ಸಿಮ್ ರಾಡ್ರಿಗಸ್ ನೇತೃತ್ವದಲ್ಲಿ ಅನ್ವಯಿಕ ಪ್ರಾಣಿಶಾಸ್ತ್ರ, ಬಯೋಸೈನ್ಸ್, ಮೈಕ್ರೋ ಬಯಾಲಜಿ, ಸಸ್ಯಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಮೆಟೀರಿಯಲ್ ಸೈನ್ಸ್ ವಿಭಾಗದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು, ಸಂತ ಅಲೋಶಿಯಸ್ ಕಾಲೇಜಿನ ಕೆಲವು ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.

ಕ್ಯಾಂಪಸ್‌ನಲ್ಲಿರುವ ಪಕ್ಷಿಗಳನ್ನು ಪತ್ತೆ ಹಚ್ಚಿ ಲೆಕ್ಕ ಮಾಡುವುದು ಒಂದು ವಿಶೇಷ ಅನುಭವ. ಪಕ್ಷಿ ಪ್ರಭೇದಗಳನ್ನು ದಾಖಲು ಮಾಡುವಲ್ಲಿ ಇದೊಂದು ವಿಶೇಷ ಪ್ರಯತ್ನವಾಗಿದ್ದು, ವಿದ್ಯಾರ್ಥಿಗಳಲ್ಲಿ ಪಕ್ಷಿಗಳ ಕುರಿತು ಜಾಗೃತಿ ಮೂಡಿಸುತ್ತದೆ. ಮನುಷ್ಯನ ದಾಳಿಯಿಂದ ಪಕ್ಷಿಗಳನ್ನು ರಕ್ಷಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಬೇಕಿದೆ. - ಜೋತ್ಸ್ನಾ ದೇಸಾಯಿ, ಎಂಎಸ್ಸಿ ಪ್ರಾಣಿಶಾಸ್ತ್ರ ವಿದ್ಯಾರ್ಥಿನಿ ಕೆಲವು ಪಕ್ಷಿಗಳು ತಮ್ಮ ಆಹಾರ ಮತ್ತು ಸಂತಾನೋತ್ಪತ್ತಿ ಪ್ರಕ್ರಿಯೆಗೆ ಹುಲ್ಲು ಮೈದಾನವನ್ನೇ ಅವಲಂಬಿಸಿವೆ. ನಾವು ಪಕ್ಷಿ ವೀಕ್ಷಣೆ ಮಾಡುತ್ತಿದ್ದ ಸಂದರ್ಭ ಹುಲ್ಲು ಮೈದಾನಕ್ಕೆ ಬೆಂಕಿ ಬಿದ್ದ ಪರಿಣಾಮ ಪಕ್ಷಿಗಳು ಹೆದರಿದ್ದವು. ಬಳಿಕ ನಾವೇ ನಂದಿಸಿದೆವು. ಸಂಖ್ಯೆ ಕಡಿಮೆಯಾಗಲು ಇದೂ ಕಾರಣವಾಗಿರಬಹುದು. - ವಿವೇಕ್ ಹಾಸ್ಯಗಾರ್, ತಂಡದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net