

ಕುಶಾಲನಗರ: ಕಾಲೇಜು ಹಂತಗಳಲ್ಲಿ ವಾರ್ಷಿಕ ವಿಶೇಷ ಶಿಬಿರಗಳ ಆಯೋಜನೆಗಳಿಂದ ವಿದ್ಯಾರ್ಥಿಗಳಿಗೆ ಆರೋಗ್ಯದ ಜೊತೆಯಲ್ಲಿ ಬದುಕಿನ ಮೌಲ್ಯ ಗಳನ್ನು ಕಲಿಸಿಕೊಡುತ್ತದೆ. ಜೊತೆಯಲ್ಲಿ ವಿದ್ಯಾರ್ಥಿಗಳ ಅಭಿರುಚಿಯನ್ನು ಗುರುತಿಸುವ ಕಾರ್ಯವಾಗುವುದು ಎಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜಿನ ವತಿಯಿಂದ ಬಸವನಹಳ್ಳಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ ೨೦೨೫-೨೬ನೇ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆರೋಗ್ಯದ ಕಾಳಜಿ ಮತ್ತು ಅಂಗಾಂಗ ದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರವಾದ ಮಾಹಿತಿ ನೀಡಿದರು.
ಪತ್ರಕರ್ತ ಕೆ.ಕೆ.ನಾಗರಾಜಶೆಟ್ಟಿ ಮಾತಾನಾಡಿ, ಇಂತಹ ಶಿಬಿರಗಳ ಮೂಲಕ ಸೇವಾ ಮನೋಭಾವ ಬೆಳೆಸಿಕೊಳ್ಳುವುದರ ಜೊತೆಯಲ್ಲಿ ನಾಯಕತ್ವದ ಗುಣಗಳು, ಧೈರ್ಯ, ಮತ್ತು ದೃಡಸಂಕಲ್ಪವನ್ನು ಕಲಿಸಿಕೊಡುತ್ತದೆ. ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುವ, ಅದರ ನಿರ್ವಹಣೆ ಮತ್ತು ಆದರ್ಶ ಜೀವನ ಮೌಲ್ಯಗಳ ಮುಖೇನ ಒಗ್ಗೂಡಿ, ಉತ್ತಮ ನಾಗರಿಕನಾಗುವ ಗುಣಗಳನ್ನು ತಿಳಿಸಿಕೊಡುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕಾಲೇಜು ವಾಣಿಜ್ಯ ವಿಭಾಗದ ಉಪನ್ಯಾಸಕಿ ಎಚ್.ಎನ್.ಲಾವಣ್ಯ ವಹಿಸಿದ್ದರು. ವೇದಿಕೆಯಲ್ಲಿ ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಟಿ.ಎ.ಲಿಖಿತ, ಶಿಬಿರಾಧಿಕಾರಿ ಕೆ.ಆರ್.ಮಂಜೇಶ್, ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಕುಮಾರ್, ಉಪನ್ಯಾಸಕರಾದ ಸಾಜಿದ, ಜಾನ್ ಪೌಲ್, ದೀಪ್ತಿ ಡಿಸೋಜ, ಶರಣ್ ಉಪಸ್ಥಿತರಿದ್ದರು.