ವಿಶ್ವ ಆರೋಗ್ಯ ಸಂಸ್ಥೆಯ ವಾದ ಸತ್ಯಕ್ಕೆ ದೂರ - ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ

mng-22nov-kishore kumar kodgi
Published on


ಮಂಗಳೂರು : ಅಡಕೆ ಆಯುರ್ವೇದೀಯ ಗುಣಗಳನ್ನು ಹೊಂದಿದ್ದರೂ, ಅದು ಕ್ಯಾನ್ಸರ್‌ಕಾರಕ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ಏಕಪಕ್ಷೀಯ ನಿರ್ಣಯಕ್ಕೆ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಪುರಾತನ ಕಾಲದಿಂದಲೂ ಅಡಕೆಯು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಆಯುರ್ವೇದ ಶಾಸ್ತ್ರದಲ್ಲಿಯೂ ಅಡಕೆಗೆ ಅದರ ಔಷದೀಯ ಗುಣಗಳಿಂದಾಗಿ ವಿಶೇಷ ಸ್ಥಾನಮಾನವಿದೆ. ಅಡಕೆ ಕ್ಯಾನ್ಸರಕಾರಕ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಅಡಕೆ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಬೆಳೆಗಾರರ ಹಿತ ರಕ್ಷಣೆಗೆ ಶ್ರಮಿಸುತ್ತಿರುವ ಕ್ಯಾಂಪ್ಕೊ ಕಾನೂನಾತ್ಮಕ ತೊಂದರೆಗಳನ್ನು ಅನುಭವಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ಸಂಶೋಧನೆಗಳ ಸಂಪೂರ್ಣ ಮಾಹಿತಿಗಳನ್ನು ಬಹಿರಂಗ ಪಡುಸಿರುವುದಿಲ್ಲ. ಹಾಗಾಗಿ ಸತ್ಯಾಸತ್ಯತೆಗಳನ್ನು ಮುಚ್ಚಿಟ್ಟಿರಬಹುದು ಅಥವಾ ವರದಿಗಳನ್ನು ತಿರುಚಿರಬಹುದೆಂಬ ಸಂಶಯ ಮೂಡುತ್ತಿದೆ. ಕ್ಯಾಂಪ್ಕೊ ಈಗಾಗಲೇ ಹಲವು ಸಂಶೋಧನೆಗಳನ್ನು ನಡೆಸಿದ್ದು ,ಅವುಗಳ ವರದಿಗಳು ಅಡಕೆ ಕ್ಯಾನ್ಸರ್‌ಕಾರಕವಲ್ಲ ಬದಲಾಗಿ ರೋಗ ಶಮನಗೊಳಿಸುವ ಔಷದೀಯ ಗುಣಗಳನ್ನು ಹೊಂದಿರುವ ಬಗ್ಗೆ ದೃಢಪಡಿಸಿದೆ.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಯ ಮಾಜಿ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರನ್ನು ಕ್ಯಾಂಪ್ಕೊ ನಿಯೋಗ ಭೇಟಿಯಾಗಿ ಚರ್ಚಿಸಿದಾಗ ಐಸಿಎಂಆರ್ ಮತ್ತು ಐಸಿಎಆರ್‌ನಲ್ಲಿ ಸಂಶೋಧನೆ ನಡೆಸಿ ಅಡಕೆ ಕ್ಯಾನ್ಸರ ಕಾರಕ ಎಂಬ ವಾದವನ್ನು ಸಮರ್ಥವಾಗಿ ಪ್ರಶ್ನಿಸುವಂತೆ ಸಲಹೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ನಿಲುವನ್ನು ಮರು ಪರಿಶೀಲಿಸುವಂತೆ ಮಾಡಲು ಐಸಿಎಂಆರ್, ಐಸಿಎಆರ್, ಎಐಯುಎಂಎಸ್, ಸಿಎಸ್‌ಐಆರ್, ಸಿಎಫ್‌ಟಿಆರ್‌ಐ ಮೈಸೂರು ಅಥವಾ ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರ್ಕಾರಿ ಮಾನ್ಯತೆ ಪಡೆದ ಹಾಗೂ ನುರಿತ ಸಂಶೋಧನಾ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿ ವರದಿ ಮಂಡಿಸಲು ಸಹಕಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರೈತರ ಪರವಾಗಿ ಕ್ಯಾಂಪ್ಕೊ ಮನವಿ ಮಾಡಲಿದೆ ಎಂದು ಎ.ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net