

ಮಂಗಳೂರು : ಅಡಕೆಯ ಸುರಕ್ಷತೆ ಮತ್ತು ಅದರ ಕ್ಯಾನ್ಸರ್ ರೋಗ ಶಮನಗೊಳಿಸುವ ಆಯುರ್ವೇದೀಯ ಗುಣಗಳ ಬಗ್ಗೆ ಸಮಗ್ರ ಸಂಶೋಧನೆ ನಡೆಸಬೇಕು . ಇದಕ್ಕೆ ಸಂಬಂಧಿಸಿದಂತೆ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಅಡಕೆ ಕೃಷಿ ಲಕ್ಷಾಂತರ ಬೆಳೆಗಾರರಿಗೆ ಜೀವನಾಧಾರವಾಗಿದೆ. ಭಾರತದ ಸಾಂಸ್ಕೃತಿಕ ಜನಜೀವನದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಡಕೆ ಮಹತ್ತರ ಪಾತ್ರ ವಹಿಸಿದೆ. ಭಾರತದಲ್ಲಿ ಸುಮಾರು 9.55 ಲಕ್ಷ ಹೆಕ್ಟೇರ್‌ಗಳಿಗೆ ಅಡಕೆ ಕೃಷಿ ವಿಸ್ತರಿಸಿದ್ದು ವಾರ್ಷಿಕವಾಗಿ 14 ರಿಂದ 18 ಲಕ್ಷ ಮೆಟ್ರಿಕ್ ಟನ್ ಅಡಕೆ ಉತ್ಪಾದನೆಯಾಗುತ್ತಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಗೊಳಿಸಿದ ಬಳಿಕ ಇದುವರೆಗೆ ಕ್ಯಾಂಪ್ಕೊ ಒಂದೇ ಸಂಸ್ಥೆ ಸುಮಾರು 650 ಕೋಟಿ ರೂ.ತೆರಿಗೆ ಪಾವತಿ ಮಾಡಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಅಡಕೆಯನ್ನು ಕ್ಯಾನ್ಸರ್‌ಕಾರಕವೆಂದು ವರ್ಗೀಕರಿಸಿರುವುದು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಅಡಕೆಯನ್ನು ಗುಟ್ಕಾ ಮತ್ತು ತಂಬಾಕಿನ ಜತೆ ಬಳಸುತ್ತಿರುವ ಕಾರಣದಿಂದ ಅದನ್ನು ಕ್ಯಾನ್ಸರ್‌ಕಾರಕವೆಂದು ಪರಿಗಣಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣ ನ್ಯಾಯೋಚಿತವಾಗಿಲ್ಲವೆಂದು ದಾಖಲೆ ಸಮೇತ ಸಾಬೀತು ಪಡಿಸಲು, ಕ್ಯಾಂಪ್ಕೊ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಿರುವ ಸಂಶೋಧನಾ ವರದಿಗಳನ್ನು ಸಲ್ಲಿಸಿದೆ. ಎಲ್ಲ ವರದಿಗಳೂ ಅಡಕೆಯ ಉಪಯೋಗ ಕ್ಯಾನ್ಸರ್‌ಕಾರಕವಲ್ಲ ಬದಲಾಗಿ ಕ್ಯಾನ್ಸರ್ ಶಮನಗೊಳಿಸುವ ಗುಣಗಳನ್ನು ಹೊಂದಿರುವ ಬಗ್ಗೆ ರುಜುವಾತು ಪಡಿಸಿವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಾದ ಐಸಿಎಂಆರ್, ಐಸಿಎಆರ್, ಎಐಐಎಂಎಸ್ ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ಗಳು ಸಂಯುಕ್ತವಾಗಿ ಅಥವಾ ಪರಸ್ಪರ ಸಹಕಾರದೊಂದಿಗೆ ಅಡಕೆಯನ್ನು ನಿರ್ದಿಷ್ಟವಾಗಿ ಅದರ ಮೂಲರೂಪದಲ್ಲೇ ಸಂಶೋಧನೆ ನಡೆಸುವ ಅಗತ್ಯತೆಯ ಕುರಿತು ಕ್ಯಾಂಪ್ಕೊ ಪ್ರಸ್ತಾವನೆ ಸಲ್ಲಿಸಿದೆ. ಅಡಕೆಯ ಉಪಯೋಗದ ಬಗ್ಗೆ ನ್ಯಾಯೋಚಿತ ಮತ್ತು ವಸ್ತು ನಿಷ್ಠ ಸಂಶೋಧನೆ ನಡೆಸಿ, ಅದರ ಔಷಧೀಯ ಗುಣಗಳ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನು ದಾಖಲೀಕರಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಬೇಕು. ಆಗ ಲಕ್ಷಾಂತರ ಬೆಳೆಗಾರರ ಬದುಕಿಗೆ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದಂತಾಗುತ್ತದೆ. ಸಂಶೋಧನೆಗೆ
ಬೇಕಾದ ನಿಧಿಯನ್ನು ಮುಂದಿನ ಬಜೆಟ್‌ನಲ್ಲಿ ಮೀಸಲಿಡಿಬೇಕೆಂದು ಕಿಶೋರ್ ಕುಮಾರ್ ಕೊಡ್ಗಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.