ಸಂಸದ ಪ್ರತಾಪ ಸಿಂಹ ಪರ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್

Prathap Simha
Published on

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಸಂಸದರ ಪರ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಆರಂಭವಾಗಿದ್ದು, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಜೋರಾಗಿದೆ.

ನೇರ ಮಾತು, ಹಿಂದುತ್ವ ಪ್ರತಿಪಾದನೆ ಮೂಲಕ ರಾಜ್ಯಾದ್ಯಂತ ಹೆಸರಾಗಿರುವ ಸಂಸದ ಪ್ರತಾಪ್ ಸಿಂಹ ಅವರು ಕ್ಷೇತ್ರದಲ್ಲಿ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಮೈಸೂರು-ಕೊಡಗು ಕ್ಷೇತ್ರವಷ್ಟೇ ಅಲ್ಲದೇ ರಾಜ್ಯಾದ್ಯಂತ ಅವರ ಅಭಿಮಾನಿಗಳು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರ ನಿಂತಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರತಾಪ್ ಸಿಂಹ ಅವರನ್ನು ಸೈದ್ಧಾಂತಿಕವಾಗಿ ವಿರೋಧಿಸಿದವರು ಸಹ ಅವರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ 2014, 2019ರ ಚುನಾವಣೆಯಲ್ಲಿ ಸುಲಭವಾಗಿ ಜಯ ಕಂಡಿರುವ ಪ್ರತಾಪ್ ಸಿಂಹ, ಮತ್ತೊಂದು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ರಿಪೋರ್ಟ್ ಕಾರ್ಡ್ ಹೆಸರಿನಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಈ ನಡುವೆ, ಇವರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂಬ ಮಾತು ಹರಿದಾಡುತ್ತಿದೆ. ಅದಕ್ಕಾಗಿ ಪ್ರತಾಪ್‌ಸಿಂಹ ಬದಲು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಪ್ರಯತ್ನಗಳು ಜೋರಾಗಿವೆ. ಈ ಬೆಳವಣಿಗೆಯಿಂದ ಸಿಂಹ ಹಾಗೂ ಅವರ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಹಾಗಾಗಿ, ಅವರ ಪರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಜೋರಾಗಿದೆ.

ನೋಟಾದ ಎಚ್ಚರಿಕೆ:

ಫೇಸ್‌ಬುಕ್ ಖಾತೆಗಳಲ್ಲಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಡದಿದ್ದರೆ ಹೋರಾಟದ ಎಚ್ಚರಿಕೆ ನೀಡಿರುವ ಅಭಿಮಾನಿಗಳು, ನೋಟಾ ಚಲಾಯಿಸುವುದಾಗಿಯೂ ಪೋಸ್ಟ್ ಹರಿಬಿಟ್ಟಿದ್ದಾರೆ. ಕೆಲವರಿಂದ ‘ಮತ್ತೊಮ್ಮೆ ಪ್ರತಾಪ್ ಸಿಂಹ’ ಎಂಬ ಪೋಸ್ಟ್ ಹರಿದಾಡಿದರೆ, ಇನ್ನೊಂದಷ್ಟು ಜನರು ‘ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್’ ನಡೆಯುತ್ತಿದೆ ಎಂದು ಆರೋಪಿಸಿ ಈ ಬಗ್ಗೆಯೂ ಆಕ್ರೋಶದ ಪೋಸ್ಟ್ ಹಾಕಿದ್ದಾರೆ. ಜತೆಗೆ ‘ಭಾರತಕ್ಕಾಗಿ ಮತ್ತೊಮ್ಮೆ ಮೋದಿ, ಮೈಸೂರಿಗಾಗಿ ಮತ್ತೊಮ್ಮೆ ಪ್ರತಾಪ್ ಸಿಂಹ’,‘ಐ ಸ್ಟಾೃಂಡ್ ವಿತ್ ಪ್ರತಾಪ್ ಸಿಂಹ’ ಎಂಬ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಹಿ ಸಂಗ್ರಹ ಅಭಿಯಾನವೂ ನಡೆಯುತ್ತಿದ್ದು, ನಮ್ಮ ಬೆಂಬಲ ಪ್ರತಾಪ್‌ಗೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ.

ಸಮುದಾಯಗಳಿಂದಲೂ ಒತ್ತಾಯ:

ಒಕ್ಕಲಿಗ ಸಂಘಟನೆಗಳ ಒಕ್ಕೂಟವು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದು, ಟಿಕೆಟ್ ಬದಲಾಯಿಸಿದರೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವುದಾಗಿಯೂ ಎಚ್ಚರಿಕೆ ನೀಡಿದೆ. ಮೈಸೂರು ಕೊಡವ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸುವ ಮೂಲಕ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಮೈಸೂರು ಭಾಗದ ಪ್ರಬಲ ಜೆಡಿಎಸ್ ನಾಯಕರಾಗಿರುವ ಶಾಸಕ ಜಿ.ಟಿ.ದೇವೇಗೌಡ ಹಾಗೂ ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಏಕೈಕ ಶಾಸಕ ಟಿ.ಎಸ್.ಶ್ರೀವತ್ಸ ಕೂಡ ಪ್ರತಾಪ್ ಸಿಂಹ ಪರ ಬ್ಯಾಟ್ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net