

ಮುದ್ದೇಬಿಹಾಳ: ರಾಜ್ಯದಲ್ಲಿ ಗೋಹತ್ಯೆ ತಡೆಯಬೇಕಾದರೆ ಗೋಪ್ರೇಮಿಗಳು ಸಾಮೂಹಿಕ ಅಭಿಯಾನ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಬಿಜೆಪಿ ರೈತಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಮಾರುತಿನಗರದಲ್ಲಿ ಶಿವಚಿದಂಬರೇಶ್ವರ ದೇವಸ್ಥಾನ ಲೋಕಾರ್ಪಣೆ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಹಿಂದು ಸಂಸ್ಕೃತಿ ವಿರೋಧಿ ಶಕ್ತಿಗಳು ಗೋ ಮಾತೆಯೊಂದಿಗೆ ವಿಕೃತವಾಗಿ ನಡೆದುಕೊಳ್ಳುತ್ತಿವೆ. ಹಸುವಿನ ಕೆಚ್ಚಲು ಕೊಯ್ಯುವುದು, ಬಾಲ ಕತ್ತರಿಸುವುದು, ಗರ್ಭಸ್ಥ ಹಸುವನ್ನು ಭೀಕರವಾಗಿ ಕೊಂದು ಮಾಂಸ ಮಾರಾಟ ಮಾಡುವ ಕೃತ್ಯಗಳಿಗೆ ಕಡಿವಾಣ ಹಾಕಲು ಗೋ ಪ್ರೇಮಿಗಳು ಅಭಿಯಾನ ನಡೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕೂಡಿಬಾಳುವುದನ್ನು ಕಲಿಸಿಕೊಡುವ ಹಿಂದು ಧರ್ಮದಲ್ಲಿ ದ್ವೇಷಕ್ಕೆ ಅವಕಾಶವಿಲ್ಲ ಎಂಬುದು ಮನವರಿಕೆಯಾಗಬೇಕು. ವಿಶ್ವದೆಲ್ಲೆಡೆ ಭಾರತೀಯರಿಗೆ ಮನ್ನಣೆ ಸಿಗುತ್ತಿರುವುದಕ್ಕೆ ಈ ಕೂಡಿ ಬಾಳುವ ಸನಾತನ ಸಂಸ್ಕೃತಿಯೇ ಕಾರಣ ಎಂದರು.
ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಮಾತನಾಡಿ, ಧರ್ಮ ಇರುವುದು ಮಾನವ ಮತ್ತು ವಿಶ್ವದ ಕಲ್ಯಾಣಕ್ಕಾಗಿ ಎಂಬ ಸತ್ಯ ಅರಿಯಬೇಕು. ಕಾವಿಧಾರಿಗಳು, ಮಠಾಧೀಶರು, ಪೀಠಾಧಿಪತಿಗಳ ತ್ಯಾಗ ಬಲಿದಾನದ ಹಿನ್ನೆಲೆಯನ್ನು ಈಗಿನವರು ಅರಿಯಬೇಕು ಎಂದರು.
ಹುಣಸಿಹೂಳೆ ಕಣ್ವಮಠದ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಳರು, ಮುರಗೋಡ ಚಿದಂಬರ ಮಠದ ಶ್ರೀ ದಿವಾಕರದೀಕ್ಷಿತ ಶಂಕರದೀಕ್ಷಿತ ಇನಾಮದಾರ, ಅಗಡಿ ಆನಂದವನದ ಗುರುದತ್ತ ಸ್ವಾಮೀಜಿ, ಲೋಕಾಪುರ ಜ್ಞಾನೇಶ್ವರ ಮಠದ ಬ್ರಹ್ಮಾನಂದ ಸ್ವಾಮೀಜಿ, ಸಿಂದಗಿ ಭೀಮಾಶಂಕರ ಮಠದ ದತ್ತಪಯ್ಯ ಸ್ವಾಮೀಜಿ, ಕೂಡ್ಲಿಗಿ ಮಠದ ಗಜಾನನ ಮಹಾರಾಜ, ಗಂಗಾ ಬಾಬಳಗಾವದ ಗುರು ಚಿದಂಬರ ದೀಕ್ಷಿತ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಸತೀಶಕುಮಾರ ಓಸ್ವಾಲ್, ಶರಣು ಸಜ್ಜನ, ಗುರು ತಾರನಾಳ, ಮಹಿಬೂಬ ಗೊಳಸಂಗಿ, ಪ್ರೀತಿ ದೇಗಿನಾಳ, ಎಂ.ಬಿ.ನಾವದಗಿ, ಕಾಮರಾಜ ಬಿರಾದಾರ, ಯಲ್ಲಪ್ಪ ನಾಯಕಮಕ್ಕಳ, ಗೋಪಿ ಮಡಿವಾಳರ, ಸದಾಶಿವ ಮಾಗಿ, ವಿಪ್ರ ಸಮಾಜ ಮಹಾಸಭಾದ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಬಾಪೂರಾಯ ದೇಸಾಯಿ ಹಡಗಲಿ, ಎಲ್.ಎಸ್.ದೇಶಪಾಂಡೆ, ಅನೀಲಕುಮಾರ ಕುಲಕರ್ಣಿ ಪಾಲ್ಗೊಂಡಿದ್ದರು.
ಸರಸ್ವತಿ ಸಾವಿತ್ರ್ಯಾಂಬ ಸಹಿತ ಶಿವಚಿದಂಬರೇಶ್ವರ, ಗಜಾನನ, ಆಂಜನೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು.