

ಕೆ.ಸಂಜೀವ ಆರ್ಡಿ ಸಿದ್ದಾಪುರ
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯ, ಗುಣಮಟ್ಟದ ಶಿಕ್ಷಣ ಲಭ್ಯವಿದ್ದರೂ, ವಿವಿಧ ಕಾರಣಗಳಿಂದ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದೆ. ಆರ್ಡಿ ಸಮೀಪದ ಕೊಂಜಾಡಿ(ಕಲ್ಮರ್ಗಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಕ್ಕಳ ದಾಖಲಾತಿಯಲ್ಲಿ ಹೆಚ್ಚಳವಾಗಿದೆ.
ಪಾಲಕರು, ಮಕ್ಕಳೊಂದಿಗೆ ಸಮಾಲೋಚನಾ ಸಭೆ, ಶಾಲಾ ವ್ಯಾಪ್ತಿಯ ಕಲ್ಮರ್ಗಿ, ತೂಂಬಿನಕೆರೆ, ಬರೆಗದ್ದೆ, ಅಲ್ಬಾಡಿ, 9ನೇ ಮೈಲ್ಕಲ್ಲು, ಕೂಸಿನತೋಟ, ಐದು ಸೆಂಟ್ಸ್(ಜನತಾ ಕಾಲನಿ), ತೊನ್ನಾಸೆ ಸುತ್ತ ಮುತ್ತಲಿನ ಭಾಗಗಳಲ್ಲಿ ಮನೆ-ಮನೆಗಳಿಗೆ ಭೇಟಿ ನೀಡಿ, ಶಾಲೆಯಲ್ಲಿ ಸಿಗುವ ಸೌಲಭ್ಯ ಕುರಿತು ಮಾಹಿತಿ ನೀಡಿ ಮಕ್ಕಳ ಪಾಲಕರ ಮನವೊಲಿಸುತ್ತಿದ್ದಾರೆ.
ದಾನಿಗಳ ಸಹಕಾರದಲ್ಲಿ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ, ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್, ಕ್ರೀಡಾ ಸಮವಸ್ತ್ರ, ಕ್ರೀಡಾ ಸೌಲಭ್ಯ, ಶೈಕ್ಷಣಿಕ ಪ್ರವಾಸ, ಶಾಲಾ ವಾರ್ಷಿಕೋತ್ಸವ, ತರಕಾರಿ, ಹೂವಿನ ತೋಟ ನಿರ್ಮಾಣ, ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ಸೌಲಭ್ಯ, ವಿನೂತನ ಮಾದರಿ ಕಾರ್ಯಕ್ರಮ ಅಳವಡಿಸಿಕೊಳ್ಳಲಾಗುತ್ತಿದೆ.
1959ರಲ್ಲಿ ಆರಂಭಗೊಂಡ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲದ ಕಾರಣ ಬಹಳಷ್ಟು ಮಕ್ಕಳು ಖಾಸಗಿ ಹಾಗೂ ಹೊರಗಿನ ಸರ್ಕಾರಿ ಶಾಲೆಗಳಿಗೆ ದಾಖಲಾತಿಗೊಂಡು ಮಕ್ಕಳ ಸಂಖ್ಯೆ ಇಳಿಮುಖವಾಗಿತ್ತು. 2016-17ರ ಸಾಲಿನಲ್ಲಿ ಕಾಯಂ ಶಿಕ್ಷಕಿ ಹಾಗೂ ಮುಖ್ಯಶಿಕ್ಷಕರ ನೇಮಕವಾಗಿದೆ. 2017-18ರಲ್ಲಿ ಮುಖ್ಯಶಿಕ್ಷಕ ಸುರೇಶ ಶೆಟ್ಟಿ, ಸಹಶಿಕ್ಷಕಿ ಸರಿತಾ ಶೆಟ್ಟಿ, ಗೌರವ ಶಿಕ್ಷಕಿ ಯಶೋದಾ ನೇತೃತ್ವದಲ್ಲಿ ಎಸ್ಡಿಎಂಸಿ, ಸ್ಥಳೀಯರು, ಹಳೇ ವಿದ್ಯಾರ್ಥಿಗಳು, ದಾನಿಗಳ ಸಹಕಾರದಲ್ಲಿ ಹಮ್ಮಿಕೊಂಡ ವಿನೂತನ ಕಾರ್ಯಕ್ರಮಗಳಿಂದ 15 ಮಕ್ಕಳು ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡು ಸಂಖ್ಯೆ 26ಕ್ಕೆ ಏರಿಕೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿ ಶಾಲೆ ಹೊಸ ಚೈತನ್ಯ ಕಂಡಿದೆ.
ಮುಖ್ಯಶಿಕ್ಷಕ ನಾರಾಯಣ ನಾಯ್ಕ, ಸಹ ಶಿಕ್ಷಕಿ ಶಶಿಕಲಾ ಶೆಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಸಾಲಿನಿಂದ ಸುಮಿತ್ರಾ ಕುಲಾಲ ಜ್ಞಾನದೀಪ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಶಾಲೆಯಲ್ಲಿ ಇನ್ನಷ್ಟು ಪ್ರಗತಿ, ಮಕ್ಕಳ ದಾಖಲಾತಿ ಏರಿಕೆಯಾಗಬೇಕು ಎನ್ನುವುದು ಹಳೇ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವರ್ಗ ಮತ್ತು ಹಳೇ ವಿದ್ಯಾರ್ಥಿಗಳ ಗುರಿ. ಹಳೇ ವಿದ್ಯಾರ್ಥಿಗಳ ಸಹಕಾರದಲ್ಲಿ ಶಾಲೆ ಈಗಾಗಲೇ ಆರ್ಷಕ ಬಣ್ಣದೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ಸಜ್ಜಾಗಿದೆ.
ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳು, ಹಳೇ ವಿದ್ಯಾರ್ಥಿಗಳು, ಎಸ್ಡಿಎಂಸಿ, ಶಿಕ್ಷಕ ವೃಂದ ಶಾಲೆಯ ಪ್ರಗತಿಗೆ ಶ್ರಮಿಸುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ಉಚಿತ ಸೌಲಭ್ಯ ನೀಡಿ ಪ್ರೋತ್ಸಾಹಿಸಲಾಗುವುದು. ಪಾಲಕರು ಮಕ್ಕಳನ್ನು ಶಾಲೆಗೆ ದಾಖಲಿಸುವುದರೊಂದಿಗೆ ಶಾಲೆ ಪ್ರಗತಿಯಲ್ಲಿ ಸಹಕರಿಸಬೇಕು.-ಪ್ರಸಾದ್ ತೊನ್ನಾಸೆ, ಅಧ್ಯಕ್ಷ,ಹಳೇ ವಿದ್ಯಾರ್ಥಿ ಸಂಘ, ಕೊಂಜಾಡಿ(ಕಲ್ಮರ್ಗಿ) ಶಾಲೆ
ಶಿಕ್ಷಣ ಇಲಾಖೆ ಹಾಗೂ ದಾನಿಗಳ ಸಹಕಾರದಲ್ಲಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದೇವೆ. ಶಾಲೆಯಲ್ಲಿ ಮಕ್ಕಳ ದಾಖಾಲಾತಿ ಹೆಚ್ಚಿಸುವಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳ ಸಹಕಾರದೊಂದಿಗೆ ವಿವಿಧ ಸೌಲಭ್ಯ, ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.-ನಾರಾಯಣ ನಾಯ್ಕ, ಮುಖ್ಯಶಿಕ್ಷಕ
ಶಾಲೆಯಲ್ಲಿ ಉತ್ತಮ ವ್ಯವಸ್ಥೆಯಿದೆ. ಮಕ್ಕಳನ್ನು ದಾಖಲಾತಿಸುವಂತೆ ಪಾಲಕರಿಗೆ ತಿಳಿಸಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ದಾನಿಗಳು, ಹಳೇ ವಿದ್ಯಾರ್ಥಿಗಳ ಸಹಕಾರದಲ್ಲಿ ನೀಡುತ್ತಿದ್ದ ಕೆಲವು ಸೌಲಭ್ಯ ಮುಂದುವರಿಸಲಾಗುತ್ತಿದೆ. ಶಾಲೆ ಪ್ರಗತಿಗೆ ಎಲ್ಲರ ಸಹಕಾರದ ಅಗತ್ಯವಿದೆ.-ಗೋಪಾಲ ನಾಯ್ಕ ಕಲ್ಮರ್ಗಿ, ಅಧ್ಯಕ್ಷ, ಎಸ್ಡಿಎಂಸಿ