

ಮಂಡ್ಯ: ಮಳವಳ್ಳಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅ.2 ರಿಂದ ಒಂದು ತಿಂಗಳ ಕಾಲ ನರೇಗಾ ಯೋಜನೆಯ 2025- 26ನೇ ಸಾಲಿನ ಕಾರ್ಮಿಕರ ಆಯವ್ಯಯ ತಯಾರಿಸಲು ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಚ್.ಜಿ.ಶ್ರೀನಿವಾಸ್ ತಿಳಿಸಿದ್ದಾರೆ.
ಅಭಿಯಾನದಡಿ ಎಲ್ಲ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಮನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿ ಬೇಡಿಕೆ ಸ್ವೀಕರಿಸಲಾಗುವುದು. ಅದರಂತೆ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನದ ಕೆಲಸ ಖಾತರಿ, ಗಂಡು ಮತ್ತು ಹೆಣ್ಣಿಗೆ ಪ್ರತಿ ದಿನಕ್ಕೆ 349 ರೂ.ನಂತೆ ಸಮಾನ ಕೂಲಿ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಅವಧಿ, ಮನರೇಗಾ ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯ ಮತ್ತು ಅರ್ಹತೆ, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಶೇ.50 ರಷ್ಟು ರಿಯಾಯಿತಿ, ಕಾಮಗಾರಿಯ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದಿದ್ದಾರೆ.
ಈ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರು, ಸಿಬ್ಬಂದಿ, ಕಾಯಕ ಮಿತ್ರರು, ಬಿಎಫ್‌ಟಿ ಒಳಗೊಂಡಂತೆ ಅನುಷ್ಠಾನ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಭಾಗವಹಿಸದ್ದಾರೆ. ವೈಯಕ್ತಿಕ ಬೇಡಿಕೆಗಳನ್ನು ಸಲ್ಲಿಸಲು ನ್ಯಾಯಬೆಲೆ ಅಂಗಡಿ, ಅಂಗನವಾಡಿ, ಗ್ರಂಥಾಲಯ, ಹಾಲಿನ ಕೇಂದ್ರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅ.31ರವರೆಗೆ ಪೆಟ್ಟಿಗೆ ಇಡಲಾಗುವುದು. ಜತೆಗೆ ವಾರ್ಡ್ ಸಭೆ ನಡೆಸಿ, ಜನರಿಂದ ಕಾಮಗಾರಿ ಬೇಡಿಕೆ ಪೆಟ್ಟಿಗೆ ಮೂಲಕ ಸ್ವೀಕೃತವಾದ ಅರ್ಜಿಯನ್ನು ಪರಿಶೀಲಿಸಿ, ನಿಯಮಾನುಸಾರ ವಾರ್ಡ್ ಸಭೆಯಲ್ಲಿ ಕಾಮಗಾರಿ ಅನುಮೋದಿಸಲಾಗುವುದು. ಹಾಗಾಗಿ ಅರ್ಹ ಫಲಾನುಭವಿಗಳು ಕೆಲಸದ ಮತ್ತು ಕಾಮಗಾರಿ ಬೇಡಿಕೆ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.