

ಭಟ್ಕಳ: ಮಕ್ಕಳ ಆರೋಗ್ಯ ಮತ್ತು ಯೋಗ ಕ್ಷೇಮವನ್ನು ಖಾತ್ರಿ ಪಡಿಸುವ ಮಹತ್ವದ ಪ್ರಯತ್ನವಾಗಿ ಪಟ್ಟಣದಲ್ಲಿ ಮಕ್ಕಳ ಲಸಿಕೆ ಹೆಚ್ಚಿಸುವ ಅಭಿಯಾನಕ್ಕೆ ಬುಧವಾರ ರಾಬಿತಾ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ. ಸಿದ್ದಲಿಂಗಯ್ಯ ಎಚ್.ಎಸ್. ಮಾತನಾಡಿ, ಭಟ್ಕಳದಲ್ಲಿ ಮಕ್ಕಳ ಆರೋಗ್ಯ ಕುರಿತು ಅತ್ಯಂತ ಜಾಗೃತಿ ವಹಿಸಬೇಕಾಗಿದೆ. ಇಲ್ಲಿ ಕಳೆದ ವರ್ಷ ದಡಾರ (ಮಿಸೆಲ್ಸ್) ಕಾಯಿಲೆ ಉಲ್ಬಣಗೊಂಡಿರುವ ಕುರಿತು ಆರೋಗ್ಯ ಇಲಾಖೆ ವರದಿ ನೀಡಿದೆ. ಅಲ್ಲದೆ ಮಕ್ಕಳ ಲಸಿಕೆ ಕುರಿತು ತಪ್ಪು ಭಾವನೆಗಳಿದ್ದು ಅದನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ಆಯೋಜಿಸಲಾಗಿದೆ ಎಂದರು.
ಲಸಿಕಾ ಅಭಿಯಾನವು ಪೋಲಿಯೋ, ದಡಾರ, ರುಬೆಲ್ಲಾ, ಡಿಫ್ತೀರಿಯಾ ಮತ್ತು ಹೆಪಟೈಟಿಸ್ ಮುಂತಾದ ರೋಗಗಳನ್ನು ತಡೆಗಟ್ಟುವ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿದೆ. ಲಸಿಕೆ ಸುಲಭವಾಗಿ ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ವೈದ್ಯಕೀಯ ಸೌಲಭ್ಯಗಳಿಲ್ಲದ ಪ್ರದೇಶದಲ್ಲಿ ಮಕ್ಕಳನ್ನು ತಲುಪಲು ಆರೋಗ್ಯ ಇಲಾಖೆ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ ಎಂದರು.
ಯೂನಿಸೆಫ್ ಸಲಹೆಗಾರ ಮನೋಜ್ ಸೆಬಸ್ಟೈನ್ ಮಾತನಾಡಿದರು. ಮಕ್ಕಳ ವೈದ್ಯ ಡಾ. ಜಮೀಲ್ ಗವಾಯಿ, ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಂಝಿಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಜಿದ್ದಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಖಮರ್ ಸದಾ ಮಾತನಾಡಿದರು. ಇಕ್ಬಾಲ್ ಜಾವೀದ್ ಕಾರ್ಯಕ್ರಮ ನಿರೂಪಿಸಿದರು.