

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಲ್ಲೆಯ ಎಲ್ಲ ಡೇರಿ, ಸೊಸೈಟಿ, ಸಹಕಾರ ಸಂಘದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಗದಿಪಡಿಸಿರುವ ನಮೂನೆಯಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸುವಂತೆ ಎಂದು ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಮುಖಾಂತರ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಮಾರ್ಗದರ್ಶನ ನೀಡುವಂತೆ ಕೋರಲಾಗುವುದು. ಇನ್ನು ಪ್ರಚಾರದ ಭಾಗವಾಗಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಹೆಚ್ಚಿನ ಸಹಕಾರ ನೀಡುತ್ತಿದ್ದು, ಅವುಗಳಿಗೆ ಜಾಹೀರಾತು ಒದಗಿಸಲು ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಅದನ್ನು ಪಡೆದುಕೊಳ್ಳಲು ಚಿಂತಿಸಲಾಗುವುದು ಎಂದರು.
ಸಮ್ಮೇಳನದ ಪ್ರಯುಕ್ತ 87 ಸ್ವಾಗತ ಕಮಾನು ದ್ವಾರವನ್ನು ಪ್ರಮುಖ ಹೆದ್ದಾರಿ, ಮುಖ್ಯರಸ್ತೆ ಹಾಗೂ ವೃತ್ತಗಳಲ್ಲಿ ಅಳವಡಿಸುವ ಬಗ್ಗೆ ಚಿಂತಿಸಲಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಗ್ರಾಫಿಕ್ಸ್ ಡಿಸೈನ್, ಕ್ರಿಯೇಷನ್ ಕಂಟೆಂಟ್ ಉಪ ಸಮಿತಿಯು ತಕ್ಷಣದಿಂದಲೇ ಕೆಲಸ ಪ್ರಾರಂಭಿಸಬೇಕು. ಉಪ ಸಮಿತಿಗಳಾದ ವಿದ್ಯುನ್ಮಾನ ಮತ್ತು ಮುದ್ರಣ-ಮಾಧ್ಯಮ, ಇವೆಂಟ್ಸ್ ಮತ್ತು ಆಫ್‌ಲೈನ್ ಪ್ರಚಾರ ಕಾರ್ಯಕ್ರಮ ಉಪ ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಬೇಕು. ಈ ಬಗ್ಗೆ ಯಾವುದೇ ಮಾರ್ಪಾಡು ಹಾಗೂ ಸಲಹೆ ಸೂಚನೆಗಳಿದ್ದರೆ ತಕ್ಷಣವೇ ವಿಷಯ ಹಂಚಿಕೊಂಡು ಕಾರ್ಯೋನ್ಮುಖರಾಗಲು ತಿಳಿಸಿದರು.
ಸಭೆಯಲ್ಲಿ ಸಮ್ಮೇಳನ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ವಿಶೇಷಾಧಿಕಾರಿ ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ವಿ.ಹರ್ಷ ಪಣ್ಣೆದೊಡ್ಡಿ, ಪದಾಧಿಕಾರಿಗಳಾದ ಹೊಳಲು ಶ್ರೀಧರ್, ದರಸಗುಪ್ಪೆ ಧನಂಜಯ, ಎಲ್.ಕೃಷ್ಣ ಇತರರಿದ್ದರು.