ರಾಜ್ಯಾದ್ಯಂತ 87 ಕಮಾನು ನಿರ್ಮಾಣ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ

Campaign Committee Meeting Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 87 ಕಮಾನು ನಿರ್ಮಾಣ, ಬಸ್ ಮತ್ತು ರೈಲುಗಳಲ್ಲಿ ಸ್ಟಿಕ್ಕರ್, ಭಿತ್ತಿಪತ್ರಗಳನ್ನು ಅಳವಡಿಸುವುದು ಸೇರಿದಂತೆ ಅಗತ್ಯವಾಗಿರುವ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ಹಾಗೂ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹೆಚ್ಚಿನ ಜನರು ಬರುವ ಕಾರಣ ಮೈಸೂರು ಮತ್ತು ಶ್ರೀರಂಗಪಟ್ಟಣ ಸೇರಿದಂತೆ ವಿವಿಧೆಡೆಗಳಲ್ಲಿ ಕೂಡಲೇ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಸಮ್ಮೇಳನದ ಯಶಸ್ಸಿಗೆ ಮುಖ್ಯವಾಗಿ ಪ್ರಚಾರ ಸಮಿತಿಯ ಕಾರ್ಯ ಬಹಳ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಉಪ ಸಮಿತಿಗಳು ತಮಗೆ ವಹಿಸಿರುವ ಕಾರ‌್ಯವನ್ನು ತಕ್ಷಣದಿಂದಲೇ ಆರಂಭಿಸುವಂತೆ ಸಲಹೆ ನೀಡಿದರು.

ಗ್ರಾಫಿಕ್ ಮತ್ತು ಸೋಶಿಯಲ್ ಮೀಡಿಯಾ ಸಮಿತಿಗಳು ಗುರುತಿಸಿರುವ ಕಂಪನಿಗಳೊಂದಿಗೆ ಕುಳಿತು ಚರ್ಚೆ ನಡೆಸಿ ಕಾರ್ಯಯೋಜನೆ ರೂಪಿಸಬೇಕು. ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆಗಳ ಹೋಲ್ಡಿಂಗ್‌ಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಕುರಿತಾದ ಫ್ಲೆಕ್ಸ್‌ಗಳನ್ನು ಅಳವಡಿಸಬೇಕು. ಪೆಟ್ರೋಲ್ ಬಂಕ್‌ಗಳಲ್ಲಿ ಹೆಚ್ಚಿನ ಜನ ಬರುವುದರಿಂದ ಅಲ್ಲಿರುವ ಪ್ರಚಾರ ಫಲಕವನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಫ್ಲೆಕ್ಸ್ ಅಳವಡಿಸಬೇಕು. ದ್ವಿಚಕ್ರ ವಾಹನಗಳು, ಆಟೋಗಳಲ್ಲೂ ಅಳವಡಿಸುವ ಕುರಿತಂತೆ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.

ಈಗಾಗಲೇ ಭುವನಗಿರಿಯಿಂದ ಕನ್ನಡ ರಥ ಆರಂಭವಾಗಿದೆ. ಅದಕ್ಕೆ ಸಂಬಂಧಿಸಿದಂತೆ ಶೀರ್ಷಿಕೆ ಗೀತೆಯನ್ನು ಶೀಘ್ರ ರಚಿಸಿ ರಥದಲ್ಲಿ ಅಳವಡಿಸುವುದು. ಮೂರು ಕವನಗಳು ಬಂದಿದ್ದು, ಮೂವರೂ ಪ್ರತ್ಯೇಕವಾಗಿ ಹಾಡುಗಳನ್ನು ಪರಿಶೀಲಿಸಿ ಸಮ್ಮೇಳನದ ಸಂಚಾಲಕರೊಂದಿಗೆ ಚರ್ಚಿಸಿ ಸಿದ್ಧಪಡಿಸಬೇಕು. ಸಮ್ಮೇಳನದ ಅಂಗವಾಗಿ ಅ.14ರಂದು ಕಬ್ಬು ಕಟಾವು ಮಾಡುವ ಸ್ಪರ್ಧೆಯನ್ನು ಆಯೋಜಿಸುವಂತೆ ಸಮಿತಿಗೆ ಸೂಚನೆ ನೀಡಿದರಲ್ಲದೆ, ಅದಕ್ಕೆ ಅಗತ್ಯವಾದ ಪ್ರಚಾರವನ್ನು ಇಂದಿನಿಂದಲೇ ಮಾಡುವುದು. ಜತೆಗೆ ಶೀಘ್ರ ತಯಾರಿಯನ್ನೂ ಮಾಡಿಕೊಳ್ಳಬೇಕು. ಸಮ್ಮೇಳನದ ಕುರಿತಂತೆ ರಾಜ್ಯಾದ್ಯಂತ ಪ್ರಚಾರ ಕಾರ‌್ಯ ಕೈಗೊಳ್ಳಲು ಮಾಧ್ಯಮಗಳಿಗೆ ಜಾಹೀರಾತು ನೀಡುವ ಸಂಬಂಧ ವಿಸ್ತೃತವಾದ ದರಪಟ್ಟಿಯ ವರದಿ ನೀಡುವಂತೆ ಸೂಚಿಸಿದರು.

ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಯ್ಯ, ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕ ಎಚ್.ಬಿ.ರಾಘವೇಂದ್ರ, ಕಸಾಪ ಪದಾಧಿಕಾರಿಗಳಾದ ಹುಸ್ಕೂರು ಕೃಷ್ಣೇಗೌಡ, ಪಣ್ಣೇದೊಡ್ಡಿ ಹರ್ಷ, ಅಪ್ಪಾಜಪ್ಪ, ದರಸಗುಪ್ಪೆ ಧನಂಜಯ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net