ಪ್ರಚಾರಕ್ಕೆಂದು ಮೊಬೈಲ್ ಆ್ಯಪ್ ಅಭಿವೃದ್ಧಿ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ

Campaign Committee Meeting Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಉದ್ದೇಶ ಮತ್ತು ಹೆಸರು ನೋಂದಾಯಿಸಲು ಮೊಬೈಲ್ ಆ್ಯಪ್ ರೂಪಿಸಲಾಗುವುದು ಎಂದು ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಚಾರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಸಾಪ ಮತ್ತು ನೋಂದಣಿ ಸಮಿತಿಯೊಂದಿಗೆ ಚರ್ಚಿಸಿ ಸಮ್ಮೇಳನಕ್ಕೆ ಸದಸ್ಯರು ನೋಂದಾಯಿಸಲು ಮತ್ತು ಪ್ರಚಾರದ ಉದ್ದೇಶಕ್ಕಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುವುದು. ಇದರ ಜತೆಗೆ ಪ್ರಚಾರ ಸಮಿತಿ ಜತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮುದ್ರಣ ಮಾಧ್ಯಮ ಪ್ರಚಾರ ಉಪಸಮಿತಿ, ಸಾಮಾಜಿಕ ಜಾಲತಾಣಗಳ ಮಾಧ್ಯಮ ಪ್ರಚಾರ ಉಪಸಮಿತಿ, ವಿದ್ಯುನ್ಮಾನ ಮಾಧ್ಯಮ ಪ್ರಚಾರ ಉಪಸಮಿತಿ, ಗ್ರಾಫಿಕ್ ವಿನ್ಯಾಸ ಮಾಧ್ಯಮ ಪ್ರಚಾರ ಉಪ ಸಮಿತಿ ಹಾಗೂ ಇತರೆ ತಂತ್ರಜ್ಞಾನಗಳ ಮಾಧ್ಯಮ ಪ್ರಚಾರ ಉಪಸಮಿತಿ ರಚಿಸಲಾಗಿದೆ. ಪ್ರತಿ ಸಮಿತಿಗೂ ಐವರು ಸದಸ್ಯರನ್ನು ನೇಮಕ ಮಾಡಲಾಗುವುದು. ಆಯಾ ಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರು ಕಾರ್ಯೋನ್ಮುಖ ರಾಗುತ್ತಾರೆ ಎಂದು ತಿಳಿಸಿದರು.

ಪ್ರಚಾರ ಕಾರ್ಯ ರೂಪಿಸುವ ಕಂಪನಿಗಳನ್ನು ಪಾರದರ್ಶಕವಾಗಿ ಯಾವುದೇ ಒತ್ತಡಕ್ಕೆ ಮಣಿಯದೇ ಆಯ್ಕೆ ಮಾಡಲಾಗುವುದು. ಇದಲ್ಲದೆ ಆನ್‌ಲೈನ್ ಮೂಲಕ ಚರ್ಚೆ ನಡೆಸುವುದರ ಜತೆಗೆ ಸಮ್ಮೇಳನ ಮುಗಿಯುವವರೆಗೆ ಪ್ರತಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಆಯೋಜಿಸಿ ಪ್ರಗತಿ ಪರಿಶೀಲಿಸಲಾಗುವುದು. ಪ್ರಚಾರ ಚುರುಕುಗೊಳಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಪ್ರಬಂಧ, ರಸಪ್ರಶ್ನೆ ಸ್ಪರ್ಧೆ, ಜಾಥಾ ಸೇರಿ ಹಲವು ಕಾರ್ಯಕ್ರಮಗಳನ್ನು ಬಿಇಒ ನೇತೃತ್ವದಲ್ಲಿ ನಡೆಸಲಾಗುವುದು ಎಂದರು.

ಸಮಿತಿಯ ಸದಸ್ಯ ಡಿ.ಎನ್.ಶ್ರೀಪಾದು ಮಾತನಾಡಿ, ಸಾಹಿತಿ ಪು.ತಿ.ನರಸಿಂಹಾಚಾರ್, ವಿಜ್ಞಾನಿ ಡಾ.ರಾಜಾರಾಮಣ್ಣ, ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಸೇರಿದಂತೆ ಹಲವು ಸಾಧಕರ ಪರಿಚಯ ಹಾಗೂ ಚಿತ್ರಗಳನ್ನು ಪ್ರಚಾರದಲ್ಲಿ ಬಳಸಿಕೊಳ್ಳಬಹುದು. ವಿದ್ಯಾರ್ಥಿಗಳು ಜಿಲ್ಲೆಯ ಮಾಹಿತಿ ತಿಳಿಯಲು ಹಾಗೂ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ರಸಪ್ರಶ್ನೆ ಸ್ಪರ್ಧೆ ನಡೆಸಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ರಾಜ್ಯಮಟ್ಟದಲ್ಲಿ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸಮ್ಮೇಳನದ ಸಮಿತಿಯಲ್ಲಿ ಸ್ಥಾನ ಕಲ್ಪಿಸಿ. ಅವರ ಮಾರ್ಗದರ್ಶನ ಪಡೆಯಬೇಕೆಂದರು. ಎಲ್ಲ ಸಮಿತಿಗಳಲ್ಲೂ ಒಂದಿಬ್ಬರು ಪತ್ರಕರ್ತರು ಇರಲಿ ಎಂದರು. ಇದಲ್ಲದೆ ಎಫ್‌ಎಂ ರೇಡಿಯೋ ಮೂಲಕ, ಚಿತ್ರಮಂದಿರದಲ್ಲಿ ಸಾಕ್ಷೃ ಚಿತ್ರ ಪ್ರದರ್ಶನದ ಮೂಲಕ ಪ್ರಚಾರ ಕೈಗೊಳ್ಳಬಹುದು ಎಂದು ಹಲವು ಸದಸ್ಯರು ಸಲಹೆ ನೀಡಿದರು.

ಸಭೆಯಲ್ಲಿ ಸಮ್ಮೇಳನ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಸಮಿತಿ ಸದಸ್ಯ ಕಾರ್ಯದರ್ಶಿ ರಾಘವೇಂದ್ರ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಧನಂಜಯ, ಚಂದ್ರಲಿಂಗು, ಹೊಳಲು ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net