ಹೆಚ್ಚು ಪ್ರಚಾರವಾಗಲಿ ಜನರನ್ನು ಸೆಳೆಯಲಿ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ

Campaign committee meeting mandya
Published on

ಮಂಡ್ಯ: ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 9 ಲಕ್ಷ ಜನ ಸೇರಿದ್ದರೆನ್ನುವ ಮಾಹಿತಿ ಇದೆ. ಆದ್ದರಿಂದ ಅದಕ್ಕಿಂತ ಹೆಚ್ಚು ಜನರು ನಮ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಪ್ರಚಾರ ಚಟುವಟಿಕೆ ಆಯೋಜನೆಗೊಳ್ಳಬೇಕು ಎಂದು ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಹೆಚ್ಚು ಜನರನ್ನು ಸೇರಿಸುವ ದೃಷ್ಟಿಯಿಂದ ಪ್ರಚಾರವನ್ನು ವಿವಿಧ ಆಯಾಮಗಳಲ್ಲಿ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಮಿತಿಯ ಜವಾಬ್ದಾರಿ ಅತ್ಯಂತ ಹೆಚ್ಚಾಗಿರುತ್ತದೆ. ಉಪಸಮಿತಿಗಳನ್ನು ರಚಿಸಿ ಸದಸ್ಯರಿಗೆ ಕಾರ್ಯಹಂಚಿಕೆ ಮಾಡಲಾಗುವುದು. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಗ್ರಾಫಿಕ್ ಡಿಸೈನ್, ಸಾಮಾಜಿಕ ಜಾಲತಾಣ ಮತ್ತು ಆ್ಯಪ್ ತಂತ್ರಜ್ಞಾನದ ಮೂಲಕ ಪ್ರಚಾರ ನಡೆಸಲು ಅನುಕೂಲವಾಗುವಂತೆ ಪರಿಣತ ಕಂಪನಿಗಳಿಗೆ ತಮ್ಮ ಯೋಜನೆ ಮಂಡಿಸಲು ಅವಕಾಶ ನೀಡಿ. ಆಯಾ ಕ್ಷೇತ್ರದ ತಜ್ಞರು ವೀಕ್ಷಿಸಿದ ನಂತರ ಆಯ್ಕೆ ಮಾಡಿ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದರು.

ನಾಗಮಂಗಲ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ಮುಂತಾದ ಸಾಹಿತ್ಯ ಚಟುವಟಿಕೆ ನಡೆಸಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಅವರ ಮೂಲಕ ಹಳ್ಳಿಗಳಿಗೆ ಸಮ್ಮೇಳನದ ವಿಷಯ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಗ್ರಾಮಮಟ್ಟದಲ್ಲಿ ಸೈಕಲ್ ಮತ್ತು ಬೈಕ್ ಜಾಥಾಗಳನ್ನು ಹಮ್ಮಿಕೊಳ್ಳಬೇಕು. ಡಿಸೆಂಬರ್ ಮಾಹೆಯಲ್ಲಿ ಮನೆಯ ಮುಂದೆ ಕನ್ನಡ ಸಾಹಿತ್ಯ ಕುರಿತು ರಂಗೋಲಿ ಹಾಗೂ ಸಂಜೆ ಕನ್ನಡ ದೀಪ ಹಚ್ಚುವ ರೀತಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಿತಿ ಸದಸ್ಯ ರೋಹಿತ್ ಮಾತನಾಡಿ, ಮಂಡ್ಯ ಮಾತ್ರವಲ್ಲದೆ ಬೇರೆ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಿಸಿ ಹೆಚ್ಚು ಜನರನ್ನು ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಾಡಬೇಕು. ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸಮ್ಮೇಳನದ ವಿಶೇಷತೆ ಇರುವ ಸ್ಥಬ್ಧಚಿತ್ರವನ್ನು ಸಿದ್ಧಪಡಿಸಿ ಭಾಗವಹಿಸಲು ಕಳುಹಿಸಬೇಕು. ದಸರಾ ಕಾರ್ಯಕ್ರಮ ನಡೆಯುವ ಎಲ್ಲ ಜಿಲ್ಲೆಗಳಲ್ಲಿ ಸಮ್ಮೇಳನದ ಪ್ರಚಾರ ನೀಡಬೇಕು ಎಂದು ಸಲಹೆ ನೀಡಿದರು.

ಸಮಿತಿ ಸದಸ್ಯ ಶಂಭು ಮಾತನಾಡಿ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಕನ್ನಡ ಬಗ್ಗೆ ಆಸಕ್ತಿ ಹೊಂದಿರುವ ಆನೇಕ ಜನರು ಇದ್ದಾರೆ. ಸಮ್ಮೇಳನದಲ್ಲಿ ದೇಶ-ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಪಾಲ್ಗೊಳ್ಳುವಂತೆ ಮಾಡಬೇಕು ಎಂದರು. ಮತ್ತೊಬ್ಬ ಸದಸ್ಯ ಯತೀಶ್ ಮಾತನಾಡಿ, ಕನ್ನಡದ ಕಂಪನ್ನು ಬೀರುವ ಜತೆಗೆ ಮಂಡ್ಯ ಜಿಲ್ಲೆಯ ಸೊಗಡನ್ನು ಪಸರಿಸಬೇಕು. ಕೃಷಿ ಆಧಾರಿತ ಜಿಲ್ಲೆ ಆಗಿರುವುದರಿಂದ ಮುಖ್ಯವಾಗಿ ರೈತ ಕೇಂದ್ರಿತ ವಿಷಯಗಳನ್ನು ಮುನ್ನೆಲೆಗೆ ತಂದು ಪ್ರಚಾರ ರೂಪಿಸಬೇಕು. ಜಿಲ್ಲೆಯ ಪ್ರವಾಸಿ ತಾಣ, ಜಾನಪದ ವಿಷಯಗಳನ್ನು ಬಳಸಿಕೊಳ್ಳಬೇಕು ಎಂದರು.

ಪಾಂಡವಪುರ ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ್ ಮೇನಾಗರ ಮಾತನಾಡಿ, ’ಸಾಹಿತ್ಯ ಪರಿಷತ್ತಿನ ನಡೆ ಶಾಲೆಗಳ ಕಡೆ’ ಎಂಬ ಪರಿಕಲ್ಪನೆಯಲ್ಲಿ ಸಾಹಿತ್ಯ, ಸಂಸ್ಕೃತಿ, ಸಾಹಿತಿಗಳ ಪರಿಚಯ ಮಾಡಿಸುವ ಸಾಹಿತ್ಯ ಅಭಿಯಾನ ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಿದರು. ಸಮಿತಿ ಸದಸ್ಯ ಶಿವಪ್ರಸಾದ್ ಮಾತನಾಡಿ, ಕೃಷಿ ಮೂಲ ಜಿಲ್ಲೆ ಆಗಿರುವುದರಿಂದ ಕಬ್ಬು ಕಡಿಯುವುದು, ನಾಟಿ ಮಾಡುವುದು ಮುಂತಾದ ಕೃಷಿ ಚಟುವಟಿಕೆಗಳ ಸ್ಪರ್ಧೆ ಏರ್ಪಡಿಸಿ ಜಾಗೃತಿ ಮೂಡಿಸಬಹುದು. ಮಂಡ್ಯ ನಗರದಿಂದ ಹೆಚ್ಚು ಜನ ಸಮ್ಮೇಳನಕ್ಕೆ ಬರುವಂತೆ ಮಾಡಲು 35 ವಾರ್ಡ್‌ಗಳ ನಗರಸಭಾ ಸದಸ್ಯರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾಗಿ ಮದ್ದೂರು ಮತ್ತು ಮಳವಳ್ಳಿ ತಾಲೂಕಲ್ಲಿ ಮ್ಯಾರಥಾನ್ ಓಟ ಹಾಗೂ ಕಬ್ಬು ಕಡಿಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಮಾತನಾಡಿ, ರಾಜ್ಯಾದ್ಯಂತ ಇರುವ ಸರ್ಕಾರದ ಹೋರ್ಡಿಂಗ್ಸ್‌ಗಳನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕಸಾಪ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹರ್ಷ ವಿ.ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪದಾಧಿಕಾರಿಗಳಾದ ಧನಂಜಯ, ಚಂದ್ರಲಿಂಗು, ಗುರುಪ್ರಸಾದ್, ಶಿವಪ್ರಸಾದ್, ಬಲ್ಲೇನಹಳ್ಳಿ ಮಂಜುನಾಥ್, ಹೊಳಲು ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net