

ಮಂಡ್ಯ: ಕಾರ್ಮಿಕ ಪರವಾಗಿ ಬಜೆಟ್ ಮಂಡಿಸುವಂತೆ ಆಗ್ರಹಿಸಿ ಮಾ.3ರಿಂದ ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ತಾಲೂಕಿನ ವಿವಿಧೆಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಪ್ರಚಾರಾಂದೋಲನ ನಡೆಸಿದವು.
ಕೊತ್ತತ್ತಿ, ಮಂಗಲ, ಬೂದನೂರು, ಸಾತನೂರು, ಗೌಡಗೆರೆ, ಉಮ್ಮಡಹಳ್ಳಿ, ಕನ್ನಲಿ, ಸೂನಗಹಳ್ಳಿ, ಹಳುವಾಡಿ, ತಗ್ಗಹಳ್ಳಿ, ಬೇವಿನಹಳ್ಳಿ ಸೇರಿದಂತೆ ಎಲ್ಲ ಗ್ರಾಮ ಪಂಚಾಯಿತಿ ಎದುರು ಪ್ರಚಾರಾಂದೋಲನ ನಡೆಸಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ಕಾರ್ಮಿಕ ಸಮಿತಿ ತರಲು ಹೊರಟಿರುವುದು ಖಂಡನೀಯ. 29 ಕಾನೂನನ್ನು ರದ್ದು ಮಾಡಬಾರದು. ಬದಲಿಗೆ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್‌ಗಳು ಕಾರ್ಮಿಕರ ಪರವಾಗಿ ಇರಬೇಕು. ಕನಿಷ್ಟ ವೇತನ 36,566 ರೂ ನಿಗದಿಯಾಗಬೇಕು. ಬೆಲೆ ಏರಿಕೆ ಅನುಗುಣವಾಗಿ ವೇತನ ಪರಿಷ್ಕರಣೆ ಆಗಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಪ್ರಮೀಳಾಕುಮಾರಿ ಮಾತನಾಡಿ, ಗುಜರಾತ್ ಹೈಕೋರ್ಟ್ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಅಧೀನದಲ್ಲಿ ಕೆಲಸ ಮಾಡಿಸಿಕೊಂಡು ಹೋಗುತ್ತಿದೆ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಿ ದರ್ಜೆಯ ನೌಕರರೆಂದು ಪರಿಗಣಿಸಬೇಕು. ರಾಜ್ಯ ಸರ್ಕಾರವು ಆರನೇ ಗ್ಯಾರಂಟಿ ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ ಹಾಗೂ ಸಹಾಯಕಿಯರಿಗೆ 10 ಸಾವಿರ ರೂ ನೀಡುವುದನ್ನು ಖಾತ್ರಿಪಡಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕೆಲಸದ ಭದ್ರತೆ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಕಲಾ, ಮುಖಂಡರಾದ ಗಾಯತ್ರಿ, ಸೌಭಾಗ್ಯಾ, ಸಾವಿತ್ರಿ, ಚಂದ್ರಶೇಖರ್ ಇತರರಿದ್ದರು.