1 ತಿಂಗಳು ಕಾಲುಬಾಯಿ ಲಸಿಕಾ ಅಭಿಯಾನ

vaccine
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಾನುವಾರುಗಳನ್ನು ಕಾಡುವ ಮಾರಣಾಂತಿಕ ಕಾಲುಬಾಯಿ ಸೋಂಕು ತಡೆಗೆ ಪ್ರತಿ ರೈತರು ತಪ್ಪದೆ ತಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಬೇಕು, ಇದು ಇಲಾಖೆ ವತಿಯಿಂದ ಉಚಿತವಾಗಿ ನೀಡುತ್ತಿದ್ದು ಎಲ್ಲರೂ ಇದರ ಸದ್ಭಳಕೆ ಮಾಡಿಕೊಳ್ಳಬೇಕು ಹಾಗೆಯೇ ಅಧಿಕಾರಿಗಳು ರೈತರಿಗೆ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಗ್ರಾಮಾಂತರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶವೈದ್ಯಕೀಯ ಸೇವಾ ಇಲಾಖೆ ವತಿಯಿಂದ 8 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದ ಪೂರ್ವಸಿದ್ಧತೆ ಬಗ್ಗೆ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ದತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ನ.3 ರಿಂದ ಡಿ.3 ರವರೆಗೆ 1 ತಿಂಗಳ ಕಾಲ ಈ ಅಭಿಯಾನ ನಡೆಯಲಿದ್ದು, ಇದರ ಮಾಹಿತಿಯನ್ನು ಬ್ಯಾನರ್, ಭಿತ್ತಿಪತ್ರಗಳ ಮೂಲಕ ರೈತರಿಗೆ ತಲುಪಿಸಿ ವ್ಯಾಪಕ ಪ್ರಚಾರ ಮಾಡಬೇಕು ಎಂದು ಜಿಲ್ಲಾ ಪಶುಪಾಲನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

5.30ರಿಂದ 11ರವರೆಗೆ ಲಸಿಕೆ: ಜಿಲ್ಲೆಯಲ್ಲಿ ಪ್ರಸ್ತುತ ಜಾನುವಾರು ಗಣತಿಯಲ್ಲಿ 1,31,986 ಹಸುಗಳು ಮತ್ತು 9,090 ಎಮ್ಮೆಗಳಿವೆ, ಒಟ್ಟು 1,41,076 ಜಾನುವಾರುಗಳಿವೆ ಎಂದು ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಆದ್ದರಿಂದ ಜಿಲ್ಲೆಯಲ್ಲಿ 1738 ಬ್ಲಾಕ್‌ಗಳನ್ನಾಗಿ ವಿಂಗಡಿಸಿದ್ದು, ಒಟ್ಟು 134 ತಂಡಗಳಿವೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೆ ಬಮೂಲ್ ಸಿಬ್ಬಂದಿ ಸೇರಿ 347 ಲಸಿಕೆದಾರರು ಪ್ರತಿದಿನ ಮುಂಜಾನೆ 5:30 ಯಿಂದ 11 ಗಂಟೆಯ ವರೆಗೆ ನಿಗಧಿತ ವೇಳಾಪಟ್ಟಿಯಂತೆ ಗ್ರಾಮಗಳಿಗೆ ಭೇಟಿ ನೀಡಿ, ಉಚಿತ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕಲಿದ್ದಾರೆ ಎಂದು ತಿಳಿಸಿದರು. ಪ್ರತಿ ರಾಸುವಿಗೆ 1 ಸಿರಿಂಜ್ ಮತ್ತು ನೀಡಲ್ಗಳನ್ನು ಬಳಸಿ ಲಸಿಕೆ ನೀಡಲಾಗುವುದು ಹಾಗಾಗಿ ಪಶು ಸಾಕಾಣಿಕೆ ಮಾಡುವವರು 3 ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಗೂ ಕರುಗಳಿಗೆ 21 ದಿನವಾದ ಬಳಿಕ ಬೂಸ್ಟರ್ ಡೋಸ್ ಲಸಿಕೆಯನ್ನು ಹಾಕಿಸಬೇಕು ಎಂದು ತಿಳಿಸಿದರು.

ರೇಬಿಸ್ ಅಭಿಯಾನ: ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಜತೆಗೆ ರೇಬೀಸ್ ಅಭಿಯಾನದ ಅಂಗವಾಗಿ ನಾಯಿಗಳಿಗೆ ರೇಬೀಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಎಡಿಸಿ ಸೈಯಿಷಾ ಆಯೇಷಾ ತಿಳಿಸಿದರು. ಜಿಲ್ಲೆಯಲ್ಲಿ ನಾಯಿಗಳಿಂದ ಹರಡುವ ರೇಬೀಸ್‌ನಂತ ಮಾರಣಾಂತಿಕ ಕಾಯಿಲೆಗಳ ತಡೆಗೆ ಈ ಅಭಿಯಾನ ಮಹತ್ವದ್ದಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಂಭೀರ ಕ್ರಮಕೈಗೊಳ್ಳಬೇಕು ಬೀದಿ ನಾಯಿಗಳು ಸೇರಿ ಸಾಕು ನಾಯಿಗಳಿಗೆ ಲಸಿಕೆ ಹಾಕುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಪೋಸ್ಟರ್ ಬಿಡುಗಡೆ: 8 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದ ಕುರಿತಾದ ಪೋಸ್ಟರ್‌ಗಳನ್ನು ಅಪರ ಜಿಲ್ಲಾಧಿಕಾರಿ ಸೈಯಿಷಾ ಆಯೇಷಾ ಬಿಡುಗಡೆ ಮಾಡಿದರು. ಪೋಸ್ಟರ್‌ನಲ್ಲಿ ಎಲ್ಲಿಂದ ಅಭಿಯಾನ ಆರಂಭವಾಗಲಿದೆ, ಎಷ್ಟು ಸಿಬ್ಬಂದಿ ಯಾವ ವೇಳೆಯಲ್ಲಿ ಲಸಿಕೆ ನೀಡಲಿದ್ದಾರೆ. ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಒಳಗೊಂಡಿದೆ. ಇವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net