ಮನೆ ಮನೆಗೆ ಸರ್ಕಾರ ಅಭಿಯಾನ

dc meeting
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಮನೆ ಮನೆಗೆ ಪೋಲಿಸ್ ಅಭಿಯಾನದ ಜತೆಯಲ್ಲಿ ಇದೀಗ ಮನೆ-ಮನೆಗೆ ಸರ್ಕಾರ ಎಂಬ ಅಭಿಯಾನವನ್ನು ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು ಸಾರ್ವಜನಿಕ ಕೆಲಸ ಕಾರ್ಯಗಳು ಮತ್ತಷ್ಟು ಸುಲಭವಾಗಿ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.

ದೇವನಹಳ್ಳಿ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025 ನೇ ಸಾಲಿನ 3ನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಮನೆ ಮನೆಗೆ ಕಾರ್ಯಾಂಗ ಎಂಬ ಅಭಿಯಾನದಲ್ಲಿ ಪ್ರತಿ ಮನೆಗೆ ಒಂದು ಕ್ಯೂಆರ್ ಕೋಡ್ ಅನ್ನು ಅಂಟಿಸಲಾಗುವುದು ಅದನ್ನು ಸ್ಕ್ಯಾನ್ ಮಾಡಿದರೆ ಗ್ರಾಮ ಪಂಚಾಯತಿಯಿಂದ ಜಿಲ್ಲಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳ ಸಂಪರ್ಕ ಸಂಖ್ಯೆ ಸಿಗುತ್ತದೆ. ಜತೆಗೆ ನಿಮ್ಮ ಸಮಸ್ಯೆಯನ್ನು ಅವರಿಗೆ ಕ್ಷಣಾರ್ಧದಲ್ಲಿ ತಿಳಿಸಬಹುದು. ಇದರಿಂದ ಅಧಿಕಾರಿಗಳನ್ನು ಹುಡುಕಿಕೊಂಡು ಕಚೇರಿಗಳಿಗೆ ಸುತ್ತುವುದು ತಪ್ಪುತ್ತದೆ ನಿಮ್ಮ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುತ್ತದೆ ಎಂದರು.

ಕನ್ನಮಂಗಲ ಪಂಚಾಯಿತಿ ಆಯ್ಕೆ: ಮನೆ ಮನೆಗೆ ಸರ್ಕಾರ ಅಭಿಯಾನದಡಿ ಸರ್ಕಾರದ ಕಾರ್ಯಾಂಗ ವೈಖರಿ ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗಬೇಕು ಎಂಬ ಉದ್ದೇಶದಿಂದ ಆರಂಭಿಕ ಹಂತದಲ್ಲಿ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಲಾಗಿದ್ದು ಕಾರ್ಯಾರಂಭ ಮಾಡಲಾಗುತ್ತದೆ ಎಂದು ಡಿಸಿ ತಿಳಿಸಿದರು.

13 ದೌರ್ಜನ್ಯ ಪ್ರಕರಣ ದಾಖಲು: ಜುಲೈ 1 ರಿಂದ ಇಲ್ಲಿಯವರೆಗೂ ಒಟ್ಟು 13 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು ಪರಿಹಾರ ಧನದ ಮಂಜೂರಾತಿ ವಿವರಗಳ ಪರಿಶೀಲನೆ ನಡೆಸಿ 13 ಪ್ರಕರಣಗಳಲ್ಲಿ ನೊಂದ 44 ಸಂತ್ರಸ್ತರಿಗೆ ಒಟ್ಟು 22.30 ಲಕ್ಷ ರೂ.ಗಳ ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನಿಗದಿತ ಸಮಯಕ್ಕೆ ವೇತನ ನೀಡಿ: ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಯಾಗಿಲ್ಲ. ಕೂಡಲೇ ವೇತನ ಪಾವತಿ ಮಾಡಿ ಪಾವತಿಯಲ್ಲಿ ವಿಳಂಬವಾದರೆ ಕ್ರಮ ವಹಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು. ಅವರಿಗೆ ಸಿಗಬೇಕಾದಂತಹ ನಿವೇಶನ, ಮನೆ ಒದಗಿಸಬೇಕು, ಸರ್ಕಾರದಿಂದ ಸಿಗುವಂತಹ ಸಾಲ ಸೌಲಭ್ಯ ಕಲ್ಪಿಸಿ. ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ವ್ಯಾಪಾರ, ವ್ಯವಹಾರಕ್ಕಾಗಿ ವಿವಿಧ ಕೌಶಲ ತರಬೇತಿ, ಮಾರ್ಗದರ್ಶನ ನೀಡಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

ನಿಮ್ಮ ಬಳಿ ಬರುತ್ತೇವೆ: ಜಿಲ್ಲಾ ಎಸ್‌ಪಿ ಸಿ.ಕೆ ಬಾಬಾ ಅವರು ಮಾತಾನಾಡಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಲ್ಲೂ ಒಂದು ಕ್ಯೂಆರ್ ಕೋಡ್ ಅಂಟಿಸಲಾಗಿದೆ ನೀವು ಅದನ್ನು ಸ್ಕ್ಯಾನ್ ಮಾಡಿ ಅದರಲ್ಲಿ ನಿಮಗೆ ಬೇಕಾದ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಕೆಲವು ಬಾರಿ ಪೊಲೀಸ್ ಅಧಿಕಾರಿಗಳು ದೂರು ತೆಗೆದುಕೊಳ್ಳುವುದಿಲ್ಲ ಎಂಬ ಮಾತು ಕೇಳಿ ಬರುತ್ತವೆ ಅದಕ್ಕಾಗಿ ನೀವು ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿದರೆ ಅದರಲ್ಲಿ ಜಿಲ್ಲೆಯ ಎಲ್ಲಾ ಪೋಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ ಸಿಗುತ್ತದೆ ನೀವು ಅದರ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇನ್ನೂ ಮುಂದೆ ಕುಂದು ಕೊರತೆ ಸಭೆಗಳನ್ನು ಠಾಣಾ ವ್ಯಾಪ್ತಿಯಲ್ಲಿ ನಡೆಸುವುದಿಲ್ಲ ನಾವೇ ನಿಮ್ಮ ಬಳಿ ಬಂದು ಸಭೆ ನಡೆಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net