

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರ್ಮಿಕರ ಪ್ರಮಾಣ ಹೆಚ್ಚಿಸಲು ಸೀ ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ತಿಳಿಸಿದರು.
ಹೊಸಕೋಟೆಯಲ್ಲಿ ಮಂಗಳವಾರ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೀ ಚೇತನಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಶೇ.10 ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹೊಸಕೋಟೆ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ 3 ತಿಂಗಳವರೆಗೆ ’ಸ್ತ್ರೀ ಚೇತನಾ ಅಭಿಯಾನ’ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ನರೇಗಾ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆಯಡಿ ಕೆಲಸಕ್ಕಾಗಿ ನೋಂದಾಯಿಸಿಕೊಂಡ ಮಹಿಳಾ ಕೂಲಿಕಾರರಲ್ಲಿ ಶೇ.52 ರಷ್ಟು ಮಾತ್ರ ಭಾಗವಹಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಈ ಯೋಜನೆ ಬಗ್ಗೆ ಹಲವು ಜಾಗೃತಿ ಕೈಗೊಂಡಿದ್ದರೂ ಶೇ.55 ರಷ್ಟು ತಲುಪಲು ಸಾಧ್ಯವಾಗಿಲ್ಲ ಎಂದು ಕಾರ್ಯದರ್ಶಿ ರಮೇಶ್ ತಿಳಿಸಿದರು. ಈ ನರೇಗಾ ಯೋಜನೆಯಡಿ ಮಹಿಳೆಯರಿಗಾಗಿಯೇ ಹಲವು ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಈ ಯೋಜನೆಯಡಿ ಮಹಿಳಾ ಕೂಲಿಕಾರ್ಮಿಕರ ಪ್ರಮಾಣ ಹೆಚ್ಚಿಸಲು 3 ತಿಂಗಳ ಕಾಲ ನಿರಂತರವಾಗಿ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷವಾಗಿ ಸ್ತ್ರೀ-ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಈ ಬಗ್ಗೆ ಮಹಿಳೆಯರು ಹೆಚ್ಚು ಮಾಹಿತಿ ಪಡೆದು ಅಭಿಯಾನದ ಯಶಸ್ವಿಗೆ ಕಾರಣವಾಗಬೇಕು ಜತೆಗೆ ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮಹಿಳೆಯರಿಗೆ ಸನ್ಮಾನ:
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 100 ದಿನ ಪೂರೈಸಿರುವ ಮಹಿಳೆಯರಿಗೆ ಹೊಸಕೋಟೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಾರಾಯಣ ಸ್ವಾಮಿ ಅವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಮಹಿಳೆಯರು ತಮ್ಮ ನೆರೆಹೊರೆಯ ಮಹಿಳೆಯರಿಗೆ ಈ ಯೋಜನೆಯ ಮಾಹಿತಿ ನೀಡಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು. ರಂಗೋಲಿ ಸ್ವರ್ಧೆ, ವೈಯಕ್ತಿಕ ಕಾಮಗಾರಿಗಳ ಅರಿವು ಮತ್ತು ಫಲಾನುಭವಿಗಳಗೆ ಆದೇಶ ಪತ್ರ ವಿತರಣೆ, ಮಹಿಳಾ ಕೂಲಿ ಕಾರ್ಮಿಕರಿಗೆ ಗ್ರಾಮೀಣ ಕ್ರೀಡಾ ಕೂಟ ಅಯೋಜನೆ, ಅರೋಗ್ಯ ತಪಾಸಣಾ ಶಿಬಿರ ಮತ್ತಿತರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಎಲ್ಲ ಕಾರ್ಯಕ್ರಮಗಳಿಂದ ಮಹಿಳಾ ಕೂಲಿಕಾರ್ಮಿಕರು ಭಾಗವಹಿಸುವಿಕೆ ಶೇ.10 ರಷ್ಟು ಹೆಚ್ಚಿಸುವುದು ಹಾಗೂ ಮಹಿಳಾ ಕಾಯಕ ಬಂಧುವಿಗೆ ಪ್ರೋತ್ಸಾಹಧನ ಕಡ್ಡಾಯವಾಗಿ ಪಾವತಿಸುವ ಉದ್ದೇಶ ಹೊಂದಲಾಗಿದೆ. ಅರ್ಹ ಮಹಿಳಾ ಕೂಲಿಕಾರರಿಗೆ ಜಾಗೃತಿ ಮೂಡಿಸುವುದು, ಮೂರು ತಿಂಗಳ ಕಾಲ ಮಹಿಳಾ ಕೂಲಿಕಾರರಿಗೆ ನಿರಂತರ ಕೆಲಸ ನೀಡಲು ಕಾಮಗಾರಿಗಳನ್ನು ಸಿದ್ಧತೆ ಮಾಡಿಕೊಳ್ಳುವುದು, ಗ್ರಾಮ ಪಂಚಾಯಿತಿ ಮಟ್ಟದ ಚುನಾಯಿತ ಸದಸ್ಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರನ್ನು ಆಹ್ವಾನಿಸಬೇಕು. ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿಶೇಷ ಪ್ರಯತ್ನಗಳನ್ನು ನಡೆಸುವ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಯೋಜನೆ ತಲುಪಿಸಲು ಕ್ರಮ:
ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಭಿಯಂತರರು, ಗ್ರಾಮ ಕಾಯಕ ಮಿತ್ರರಿಗೆ ಹಾಗೂ ಸಿಬ್ಬಂದಿಗೆ ಸನ್ಮಾನಿಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅರ್ಹ ಪಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಲು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಾರಾಯಣ ಸ್ವಾಮಿ ತಿಳಿಸಿದರು.
----------