

ಮಡಿಕೇರಿ: ಸಿದ್ದಾಪುರದ ಬಾಡಗಬಾಣಂಗಾಲ ಭಾಗದಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ಅದರ ಚಲನವಲನ ಪತ್ತೆಹಚ್ಚಲು ಅರಣ್ಯ ಇಲಾಖೆಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಎರಡು ದಿನಗಳ ಹಿಂದೆ ಬಾಡಗಬಾಣಂಗಾಲ ಗ್ರಾಮದ ಮಠ ಎಂಬಲ್ಲಿ ಒಂದು ಹಸುವನ್ನು ಕೊಂದು ತಿಂದಿತ್ತು. ಇದರಿಂದ ಈ ಭಾಗದ ಜನರು ಭೀತಿಗೊಂಡಿದ್ದರು. ಅಲ್ಲದೆ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಕೂಡ ತೀವ್ರವಾಗಿದೆ. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಪ್ರದೇಶಗಳ ಕಾಫಿ ತೋಟಗಳಲ್ಲಿ ಆನೆಗಳು ದಾಂಧಲೆ ನಡೆಸಿ ನಷ್ಟ ಉಂಟು ಮಾಡುತ್ತಿವೆ.
ಈ ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಆನೆಗಳ ಚಲನವಲನಗಳ ಗಮನಿಸಲು ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ವೀರಾಜಪೇಟೆ ತಾಲೂಕು ಡಿಸಿಎಫ್ ಶರಣಬಸಪ್ಪ ಮಾಹಿತಿ ನೀಡಿದರು. ಇತ್ತೀಚೆಗೆ ಹೊಸೂರು ಬೆಟ್ಟಗೇರಿಯಲ್ಲಿ ಕಾಡಾನೆ ದಾಳಿ ನಡೆಸಿ ಮಹಿಳೆಯನ್ನು ಸಾಯಿಸಿದ ಘಟನೆ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲು ನಡೆಯುತ್ತಿದೆ. ಹೀಗಾಗಿ ಮುಂದಿನ ಕೆಲವು ದಿನಗಳ ಬಳಿಕ ಹಾಸನ ಜಿಲ್ಲೆಗೆ ತೆರಳಿದ ಸಾಕಾನೆಗಳು ವಾಪಸ್ ಬಂದ ನಂತರ ಪುಂಡಾನೆಗಳ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.