

ಚಿಕ್ಕೋಡಿ: ಮಹಾರಾಷ್ಟ್ರದ ಮಹಾಬಲೇಶ್ವರ, ಕೊಯ್ನ ಜಲಾಶಯ ಪರಿಸರದಲ್ಲಿ ಹಾಗೂ ಕೃಷ್ಣಾ ತೀರದಲ್ಲಿಯೂ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ ಕೃಷ್ಣಾ ಹಾಗೂ ವೇದಗಂಗಾ,ದೂಧಗಂಗಾ ನದಿಗಳಲ್ಲಿ ನೀರಿನ ಹರಿವಿನ ಮಟ್ಟ ಭಾನುವಾರವೂ ಯಥಾಸ್ಥಿತಿಯಲ್ಲಿದೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.28 ಲಕ್ಷ ಕ್ಯೂಸೆಕ್ ಹಾಗೂ ದೂಧಗಂಗಾ ನದಿಯಿಂದ 33,616 ಕ್ಯೂಸೆಕ್ ಸೇರಿ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,62,491 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 1.80 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ವಿವಿಧ ಜಲಾಶಯಗಳಿಂದ ಹಾಗೂ ಮಳೆಯಿಂದ ಬರುವ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಲಮಟ್ಟಿಯಿಂದ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ನದಿ ನೀರು ಯಥಾಸ್ಥಿತಿ ಕಾಯ್ದುಕೊಂಡಿದೆ.
ಸುತ್ತು ಬಳಸಿ ಪ್ರಯಾಣ: ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳ ಹಂತದ 8 ಸೇತುವೆಗಳು ನಾಲ್ಕೈದು ದಿನಗಳಿಂದ ಜಲಾವೃತ ಸ್ಥಿತಿಯಲ್ಲಿಯೇ ಇವೆ. ಮಹಾರಾಷ್ಟ್ರ ಸಂಪರ್ಕಿಸುವ ಸದಲಗಾ-ಬೋರಗಾವ, ಯಡೂರ ಬಳಿ ಅಡ್ಡಲಾಗಿ ನಿರ್ಮಿಸಲಾಗಿರುವ ಯಡೂರ-ಕಲ್ಲೋಳ, ದೂಧಗಂಗಾ ನದಿಗೆ ಮಲಿಕವಾಡ ಗ್ರಾಮದ ಬಳಿ ನಿರ್ಮಿಸಲಾಗಿರುವ ಮಲಿಕವಾಡ-ದತ್ತವಾಡ ಸೇತುವೆ ಮತ್ತು ವೇದಗಂಗಾ ನದಿಗೆ ಅಡ್ಡಲಾಗಿರುವ ಸಿದ್ನಾಳ-ಹುನ್ನರಗಿ, ಕಾರದಗಾ-ಬೋಜ, ಬೋಜವಾಡಿ-ಕುನ್ನೂರ, ಜತ್ರಾಟ-ಭೀವಶಿ, ಸಿದ್ನಾಳ-ಅಕ್ಕೋಳ ಸೇರಿ ಕೆಳಹಂತದ 7 ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಸದಲಗಾ-ಬೋರಗಾಂವ ಸೇತುವೆ ಭಾನುವಾರ ಸಂಜೆ ಸಂಚಾರಕ್ಕೆ ಮುಕ್ತವಾಗಿದೆ.