

ದೇವದುರ್ಗ: ಒಂದು ವಾರದಿಂದ ಅಬ್ಬರಿಸಿದ್ದ ಕೃಷ್ಣಾ ನದಿ ಶಾಂತವಾಗುತ್ತಿದೆ. ಆದರೆ, ಪ್ರವಾಹದಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ಸೋಮವಾರ 2.22 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ.
ಎರಡ್ಮೂರು ದಿನಗಳಿಂದ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಭಾನುವಾರ ಹಾಗೂ ಸೋಮವಾರ 2.5 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದೆ. ಬಸವಸಾಗರ ಜಲಾಶಯದಲ್ಲಿ 27.64 ಟಿಎಂಸಿ ನೀರಿನ ಸಂಗ್ರಹವಿದೆ. 30 ಸಾವಿರ ಕ್ಯೂಸೆಕ್ ಉಳಿಸಿಕೊಂಡು 2,22,850 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಒಂದು ವಾರದಿಂದ ಸಂಪೂರ್ಣ ಮುಳುಗಡೆಯಾಗಿದ್ದ ಹೂವಿನಹೆಡಗಿ ಸೇತುವೆ ಮೇಲೆ ನೀರಿನ ಹರಿವು ಸೋಮವಾರ ತಗ್ಗಿದ್ದು ಬೈಕ್ ಹಾಗೂ ಲಘು ವಾಹನಗಳ ಸಂಚಾರ ಆರಂಭವಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ಪರಿಶೀಲನೆ ನಡೆಸಿದ ನಂತರ ಸಾರಿಗೆ ಸಂಸ್ಥೆ ಬಸ್ ಹಾಗೂ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ತಾಲೂಕು ಆಡಳಿತ ನಿರ್ಧರಿಸಿದೆ.
ನಾಲ್ಕೈದು ದಿನಗಳಿಂದ ಜಲಾವೃತವಾಗಿದ್ದ ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿ ಪೂಜಾ ಕೈಂಕರ್ಯಕ್ಕೆ ಅವಕಾಶ ಸಿಕ್ಕಿದೆ. ಬಸವೇಶ್ವರ ಹಾಗೂ ಆಂಜನೇಯ ದೇವಸ್ಥಾನಗಳೂ ಜಲದಿಗ್ಬಂಧನದಿಂದ ಮುಕ್ತವಾಗಿವೆ. ಹೂವಿನಹೆಡಗಿಯ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಇನ್ನೂ ನೀರಲ್ಲಿ ಮುಳುಗಿದ್ದು, ದೇವಸ್ಥಾನ ಗೋಪುರದ ಧ್ವಜ ಕಾಣಿಸುತ್ತಿದೆ. ಅಣೆಮಲ್ಲೇಶ್ವರ, ವೀರಗೋಟದ ಮೌನಲಿಂಗೇಶ್ವರ, ಗೂಗಲ್ ಅಲ್ಲಮಪ್ರಭು ದೇವಸ್ಥಾನ ಸಮೀಪ ಬಂದಿದ್ದ ನೀರು ಈಗ ಇಳಿಕೆಯಾಗಿದೆ.
ನದಿದಂಡೆ ಗ್ರಾಮಗಳಾದ ತಿಂಥಣಿ ಬ್ರಿಡ್ಜ್, ವೀರಗೋಟ, ಚಿಂಚೋಡಿ, ಲಿಂಗದಹಳ್ಳಿ, ಬಾಗೂರು, ಅಂಜಳ, ಗೋಪಳಾಪುರ, ಹೂವಿನಹೆಡಗಿ, ಜೋಳದಹೆಡಗಿ, ಕೋಣಚಪ್ಪಳಿ, ದೊಂಡಂಬಳಿ, ಮ್ಯಾದರ್‌ಗೋಳ, ಕರ್ಕಿಹಳ್ಳಿ, ಕೊಪ್ಪರ, ಗೂಗಲ್, ಬಸವಂತಪುರ ಸೇರಿ ವಿವಿಧೆಡೆ ಜಮೀನಿಗೆ ನುಗ್ಗಿದ್ದ ನೀರಿನ ಪ್ರಮಾಣ ಇಳಿಕೆಯಾಗಿದೆ. ಆದರೆ, ನಾಟಿ ಮಾಡಿದ್ದ ಭತ್ತ, ಬಿತ್ತನೆ ಮಾಡಿದ್ದ ಹತ್ತಿ, ಸೂರ್ಯಕಾಂತಿ, ತೊಗರಿ ಬೆಳೆ ಕೊಳೆತಿದ್ದು, ಮಣ್ಣಿನ ಮೇಲ್ಪದರು ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.