ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಪೋಷಿಸಲು ಕರೆ

25 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಾಡಿನ ನಾಶ ಈಗಾಗಲೇ ಪರಿಸರದ ಜತೆಗೆ ಕಾಲಗಳ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಇನ್ನೂ ಹೆಚ್ಚಿನ ಅವಘಡ ತಡೆಯಲು ಅರಣ್ಯ ರಕ್ಷಣೆಯೊಂದಿಗೆ ಹೆಚ್ಚಿನ ಗಿಡಗಳನ್ನು ಬೆಳೆಸಬೇಕು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಅಭಿಪ್ರಾಯಪಟ್ಟರು.

ನಗರದ ಕೆಲಗೇರಿಯ ಜೆಎಸ್​ಎಸ್​ ಮಹಾ ವಿದ್ಯಾಪೀಠ ಆವರಣದಲ್ಲಿ 500 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಲು ಪಣ ತೊಡಬೇಕು. ಮಕ್ಕಳಲ್ಲೂ ಈ ಹವ್ಯಾಸ ಬೆಳೆಸಲು ಪಾಲಕರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು. ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ನಿರ್ದೇಶನದಂತೆ ದೇಶಾದ್ಯಂತ ಸಾಗಿರುವ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಬೆಳಸುವ ಯೋಜನೆಯೂ ಒಂದು ಎಂದರು.

ಜೆಎಸ್​ಎಸ್​ ಸಂಸ್ಥೆ ಆಡಳಿತಾಧಿಕಾರಿ ಎಸ್​.ಜಿ. ಬಿರಾದಾರ ಮಾತನಾಡಿ, ಸಸ್ಯದ ಪ್ರೀತಿ ಮತ್ತದರ ಒಡನಾಟವನ್ನು ಮಕ್ಕಳಿಗೆ ಪಠ್ಯದ ಒಂದು ಭಾಗವಾಗಿ ಕಲಿಸುವಂತಾಗಬೇಕು. ಕೆವಿಜಿ ಬ್ಯಾಂಕ್​ ಬೃಹತ್​ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಕೈ ಹಾಕುವ ಮೂಲಕ ಪರಿಸರ ರಕ್ಷಣೆಗೆ ಮೇಲ್ಪಂಕ್ತಿ ಹಾಕಿದೆ ಎಂದರು.

ಸಿ.ಕೆ. ಹೆರಕಲ್​, ಹು-ಧಾ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿದರು. ಆರ್​.ಟಿ. ಕಾಂಬಳೆ, ಪುನೀತ ಎಂ., ಸತೀಶ್​ ಆರ್​, ದಿಲೀಪ್​ ಕುಮಾರ, ಇತರರು ಇದ್ದರು. ಬ್ಯಾಂಕಿನ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net