ಕೋರ್ಟ್ ಸಂಕೀರ್ಣದಲ್ಲಿರುವ ಅಂಚೆ ಕಚೇರಿಗೆ ಕನ್ನ: 10 ಸಾವಿರ ರೂ. ನಗದು ಇದ್ದ ಲಾಕರ್ ಕಳ್ಳತನ

Crime Logo
Published on

ಬೆಂಗಳೂರು: ನ್ಯಾಯಾಲಯದ ಅವರಣದಲ್ಲಿಯೇ ಕಳ್ಳರು ಕೈಚಳಕ ತೋರಿರುವ ಘಟನೆ ನಡೆದಿದೆ.
ನೃಪತುಂಗ ರಸ್ತೆಯ ಎಸಿಎಂಎಂ ಕೋರ್ಟ್ ಸಂಕೀರ್ಣದಲ್ಲಿರುವ ಅಂಚೆ ಕಚೇರಿಯ ಕಿಟಕಿ ಗ್ರಿಲ್ ಮುರಿದಿರುವ ದುಷ್ಕರ್ಮಿಗಳು 10 ಸಾವಿರ ರೂ. ನಗದು ಇದ್ದ ಲಾಕರ್ ಹಾಗೂ ಕೆಲ ದಾಖಲೆಗಳನ್ನು ಕಳವು ಮಾಡಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಲಕ್ಷ್ಮೀ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಅ.೨೧ರಂದು ಸಂಜೆ ೬ ಗಂಟೆಗೆ ಸಹಾಯಕ ಪೋಸ್ಟ್ ಮಾಸ್ಟರ್ ಅಶ್ವತಿ ಅವರು ಅಂಚೆ ಕಚೇರಿ ಬೀಗ ಹಾಕಿಕೊಂಡು ಹೋಗಿದ್ದಾರೆ. ಅ.೨೩ರಂದು ಬೆಳಗ್ಗೆ ೧೦ ಗಂಟೆಗೆ ಕಚೇರಿ ತೆರೆದು ನೋಡಿದಾಗ ಅಲ್ಮೇರಾ ತೆರೆದಿರುವುದು ಕಂಡು ಬಂದಿದೆ. ಈ ವೇಳೆ ಪರಿಶೀಲನೆ ಮಾಡಿದಾಗ ದುಷ್ಕರ್ಮಿಗಳು ಅಂಚೆ ಕಚೇರಿಯ ಹಿಂಭಾಗದ ಕಿಟಕಿ ಗ್ರಿಲ್ ಕತ್ತರಿಸಿ, ಲಾಕರ್ ಹಾಗೂ ಕೆಲ ದಾಖಲೆಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net