

ಮುಧೋಳ: ವಿದ್ಯಾರ್ಥಿಗಳ ನಿರ್ದಿಷ್ಟವಾದ ಗುರಿ ಹೊಂದಿ ಅದರ ಸಾಧನೆಗೆ ನಿರಂತರವಾಗಿ ಪರಿಶ್ರಮ ವಹಿಸಿದರೆ ಉನ್ನತ ಸ್ಥಾನ ಪಡೆಯಬಹುದು ಎಂದು ಪತ್ರಕರ್ತ ವೆಂಕಟೇಶ ಗುಡೆಪ್ಪನವರ ಹೇಳಿದರು.
ಗುರುವಾರ ನಗರದ ಬವಿವಿ ಸಂಘದ ಬಸವೇಶ್ವರ ಮಹಿಳಾ ಸ್ವತಂತ್ರ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಪಾಲಕರು ಹಲವಾರು ಕಷ್ಟದ ನಡುವೆಯೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ವಿದ್ಯಾರ್ಥಿಗಳು ಮೊಬೈಲ್ ಚಾಳಿಗೆ ಬಿದ್ದು ತಮ್ಮ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನಗಳು ಒಳ್ಳೆಯದಕ್ಕಾಗಿ ತಯಾರಿಯಾಗುತ್ತಿದ್ದು ಮೊಬೈಲ್ ಅನ್ನು ಒಳ್ಳೆಯ ವಿಚಾರಕ್ಕಾಗಿ ಉಪಯೋಗಿಸಿ ನಿಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಎಮ್.ಎ. ಮೋರೆ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಕೆಗೆ ಸೀಮಿತವಾಗದೇ ಉತ್ತಮವಾದ ನಡವಳಿಕೆ ಹಾಗೂ ಅಭ್ಯಾಸಗಳನ್ನ ಬೆಳೆಸಿಕೊಂಡು ಸುಸಂಸ್ಕೃತರಾಗಿ ರೂಪುಗೊಳ್ಳಬೇಕು. ಪ್ರತಿ ವಿದ್ಯಾರ್ಥಿಗೂ ಪದವಿ ಪೂರ್ವ ಹಂತ ಬಹುಮುಖ್ಯ. ಪರೀಕ್ಷಾ ಸಮಯ ಸಮೀಪಿಸುತ್ತಿರುವುದರಿಂದ ಪೌಷ್ಟಿಕ ಆಹಾರ ಸೇವನೆ ಅತ್ಯವಶ್ಯಕ. ಈ ಕಾರಣಕ್ಕಾಗಿ ನಿಮ್ಮ ಬದುಕು ರೂಪಿಸಿಕೊಳ್ಳುವ ರೂವಾರಿಗಳು ನೀವೇ ಆಗಿರುತ್ತೀರಿ ಎಂದು ಹೇಳಿದರು.
ಮುಧೋಳದ ದಾನಮ್ಮದೇವಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಎಮ್.ಎಮ್. ಹಿರೇಮಠ ಮಾತನಾಡಿ, ಮೊಬೈಲ್‌ದಿಂದ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಕಳಾಹೀನರಾಗುತ್ತಿದ್ದು, ಅವರ ಭವಿಷ್ಯ ಚ್ಯುತಿ ಬರುತ್ತಿದೆ. ಆದ್ದರಿಂದ ಪಾಲಕರು ಹಾಗೂ ಗುರುಗಳ ಮಾರ್ಗದರ್ಶನ ಪಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಹೇಳಿದರು.
ಶಿರೋಳದ ರಮೇಶಣ್ಣ ಗಡದನ್ನವರ ಶಾಲೆಯ ಅಧ್ಯಕ್ಷ ಶಾಂತಯ್ಯ ಗಣಾಚಾರಿ, ಎನ್‌ಜಿಎಚ್‌ಎಸ್ ಶಾಲೆಯ ಮುಖ್ಯಶಿಕ್ಷಕ ಜಿ.ಜಿ. ಕಟ್ಟಿಮನಿ, ಮುಖ್ಯಶಿಕ್ಷಕ ವಿ.ಎಸ್. ಜೈನಾಪೂರ ಮಾತನಾಡಿದರು.
ಎಲ್.ಎಸ್. ಅತ್ತಾರ, ಎನ್.ಎಚ್. ಪೂಜಾರಿ, ಜಿ.ಬಿ.ಹಡಪದ, ಎಸ್.ಎಂ. ಮಠಪತಿ, ಯು.ಎಮ್. ಪೂಜಾರಿ, ಟಿ.ಎನ್. ಅಗಸಿಮನಿ, ಬೃಂದಾ ಕೊರವರ, ಅನಿತಾ ಸಂಕೋಗೋಳ ಇದ್ದರು.
ಶಿಲ್ಪಾ ಕರಿಗಾರ ಹಾಗೂ ಸ್ನೇಹಾ ಮಾದರ ಸ್ವಾಗತಿಸಿ, ಪಾರ್ವತಿ ಹಿರೇಮಠ ವಂದಿಸಿದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.