

ಶಿರಹಟ್ಟಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕು ಮತ್ತು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಡಿ.26ರಂದು ಶಿರಹಟ್ಟಿ ಬಂದ್ ಕರೆ ನೀಡಲಾಗಿದೆ ಎಂದು ಕಾಂಗ್ರೆಸ್ ಎಸ್‌ಸಿ ಬ್ಲಾಕ್ ಅಧ್ಯಕ್ಷ ಮುತ್ತುರಾಜ ಬಾವಿಮನಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸತ್ತಿನ ಕಲಾಪದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಬಗ್ಗೆ ಸದನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದು ತಪ್ಪು. ಗೌರವಯುತ ಸ್ಥಾನದಲ್ಲಿ ಇದ್ದುಕೊಂಡು ಸಂವಿಧಾನ ಶಿಲ್ಪಿಯ ಬಗ್ಗೆ ಅಸಂಬದ್ಧವಾಗಿ ನುಡಿದಿರುವುದು ನಮಗೆಲ್ಲ ಬೇಸರ ತರಿಸಿದೆ. ಅಂಬೇಡ್ಕರ್‌ಗೆ ಅವಮಾನ ಮಾಡಲು ಕೇಂದ್ರ ಸರ್ಕಾರ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
ಡಿ.26ರಂದು ಪಟ್ಟಣದಲ್ಲಿ ವಿವಿಧ ಕನ್ನಡಪರ, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿ, ಸಂಪೂರ್ಣ ಶಿರಹಟ್ಟಿ ಬಂದ್‌ಗೆ ಕರೆ ನೀಡಲಾಗಿದೆ. ತಾಲೂಕಿನ ಎಲ್ಲ ಸಂಘಟನೆಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಶಿರಹಟ್ಟಿ ವರ್ತಕರ ಸಂಘಗಳು ಸೇರಿ ಎಲ್ಲರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು. ದೇವೇಂದ್ರ ಶಿಂಧೆ, ಹಮೀದ ಸನದಿ, ಚಾಂದಸಾಬ್ ಮುಳಗುಂದ, ಸುರೇಶ ಬೀರಣ್ಣವರ, ಮಹಾಂತೇಶ ದಶಮನಿ, ಬಸವರಾಜ ಕಂಬಳಿ, ಸಂತೋಷ ಕುರಿ, ಪ್ರಕಾಶ ಬಡೆಣ್ಣವರ, ಮಲೀಕ್ ಒಂಟಿ, ಮಂಜುನಾಥ ಗುಡಿಮನಿ ಇದ್ದರು.