

ಧಾರವಾಡ: ಜಿಲ್ಲೆಯ ಯಾವುದೇ ಸ್ಥಳದಿಂದ ನೆರವು ಬಯಸಿ ಜನ ಕರೆ ಮಾಡಿದರೆ ತಕ್ಷಣ ಪೊಲೀಸ್ ಇಲಾಖೆ ಸ್ಪಂದಿಸಲು ಒಂದೇ ಭಾರತ, ಒಂದೇ ತುರ್ತು ಕರೆ ಅಡಿ ಉಚಿತ ದೂರವಾಣಿ ಸಂಖ್ಯೆ 112 ಸಹಾಯವಾಣಿಗೆ ಹಾಗೂ ನಿರ್ಭಯ ವಾಹನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮಹಿಳೆಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ನಿರ್ಭಯ ಯೋಜನೆಯಡಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗೆ ಒಂದರಂತೆ ಒಂಬತ್ತು ನಿರ್ಭಯ ದ್ವಿ-ಚಕ್ರ ವಾಹನ ನೀಡಲಾಗಿದೆ. ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿದರೆ ಸಮೀಪದಲ್ಲಿರುವ ತುರ್ತು ಸ್ಪಂದನ ವಾಹನದಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿ ಅಗತ್ಯ ನೆರವು ನೀಡಲಿದ್ದಾರೆ ಎಂದರು.
ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತುರ್ತು ಸಂದರ್ಭಗಳಲ್ಲಿ ಹಾಗೂ ವಿಶೇಷವಾಗಿ ಮಹಿಳೆಯರ ರಕ್ಷಣೆ ಮತ್ತು ಅವರ ಸಮಸ್ಯೆಗಳಿಗೆ ಶೀಘ್ರದಲ್ಲಿ ಸ್ಪಂದಿಸಲು ಜಿಲ್ಲಾ ಪೊಲೀಸ್ ಘಟಕದಿಂದ ನಿರ್ಭಯ ವಾಹನಗಳನ್ನು ಪೂರೈಸಲಾಗಿದೆ. ಅಪಘಾತ, ಗಲಭೆ ಸೇರಿ ಯಾವುದೇ ದುರ್ಘಟನೆ ನಡೆದಾಗ ಸಹಾಯವಾಣಿ (112)ಗೆ ಕರೆ ಮಾಡಿದರೆ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಅಗತ್ಯ ನೆರವು, ಪ್ರಾಥಮಿಕ ಚಿಕಿತ್ಸೆ, ರಕ್ಷಣೆ ನೀಡಲು ಅನುಕೂಲವಾಗುವ ಆಧುನಿಕ ಸೌಲಭ್ಯ ಹೊಂದಿರುವ ತುರ್ತು ಸ್ಪಂದನ ವಾಹನಗಳನ್ನು ಸೇವೆಗೆ ಸಿದ್ಧಗೊಳಿಸಲಾಗಿದೆ. ಸಹಾಯವಾಣಿ ಮೂಲಕ ಇದರಲ್ಲಿ ದಾಖಲಾಗುವ ಕರೆಗಳಿಗೆ ಅನುಗುಣವಾಗಿ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದರು.
9 ನಿರ್ಭಯ ದ್ವಿ-ಚಕ್ರ ವಾಹನಗಳು, ಸಹಾಯವಾಣಿ ಸೇವೆಯ 6 ಕಾರುಗಳಿಗೆ ಚಾಲನೆ ನೀಡಲಾಯಿತು. ಡಿವೈಎಸ್ಪಿ ಎಂ.ಬಿ. ಸಂಕದ, ಡಿಸಿಆರ್ಬಿ ಡಿವೈಎಸ್ಪಿ ರಾಮನಗೌಡ ಹಟ್ಟಿ, ಡಿಎಆರ್ ಡಿವೈಎಸ್ಪಿ ಜಿ.ಸಿ. ಶಿವಾನಂದ, ಪೊಲೀಸ್ ಸಿಬ್ಬಂದಿ, ಇತರರು ಇದ್ದರು.