ಮತ್ತೆ ಉಸ್ತುವಾರಿ ಬದಲಾವಣೆ ಕೂಗು

Published on

ಕೋಲಾರ: ನವೆಂಬರ್​ನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸೇರಿ ಕೆಲವು ಬದಲಾವಣೆ ಆಗಲಿವೆ ಎಂಬ ಸುದ್ದಿ ಚರ್ಚೆಯಲ್ಲಿದ್ದು, ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಬದಲಾವಣೆ ಆಗಲಿದೆ ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಜಿಲ್ಲಾ ಉಸ್ತುವಾರಿ ಸ್ಥಾನವನ್ನು ಜಿಲ್ಲೆಯವರಿಗೇ ನೀಡಬೇ ಕೆಂಬುದು ಬಹುದಿನಗಳ ಬೇಡಿಕೆ ಆಗಿದೆ. ಕೋಲಾರದಲ್ಲಿ ಕಾಂಗ್ರೆಸ್​ನ ನಾಲ್ವರು ಶಾಸಕರು, ಇಬ್ಬರು ಎಂಎಲ್​ಸಿಗಳು ಇದ್ದಾರೆ. ಜಿಲ್ಲೆಯಿಂದ ಆಯ್ಕೆಯಾಗಿರುವ 4 ಶಾಸಕರು ಹೊಸಬರೇನೂ ಅಲ್ಲ. 3 ಮತ್ತು 2 ಬಾರಿ ಶಾಸಕರಾಗಿ ಅನುಭವ ಹೊಂದಿರುವವರೂ ಇದ್ದಾರೆ. ಸರ್ಕಾರ ರಚನೆಯಾದ ಸಂದರ್ಭದಲ್ಲಿ 3ನೇ ಬಾರಿಗೆ ಆಯ್ಕೆಯಾದ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. 2ನೇ ಬಾರಿ ಆಯ್ಕೆಯಾಗಿರುವ ಕೆಜಿಎಫ್​ನ ರೂಪಕಲಾ ಕೂಡ ಆಕಾಂಕ್ಷಿಯಾಗಿದ್ದರು. ತಂದೆಗೆ ಮಂತ್ರಿ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದರು. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸಹ 2ನೇ ಬಾರಿ ಶಾಸಕರಾಗಿದ್ದು, ಕೋಮುಲ್​ ಅಧ್ಯಕ್ಷರ ಸ್ಥಾನ ಇದ್ದ ಕಾರಣ ಸಚಿವ ಸ್ಥಾನಕ್ಕೆ ಲಾಬಿ ನಡೆಸಲಿಲ್ಲ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್​ ಹೈಕಮಾಂಡ್​ ನೀಡಿದರೆ ಸಚಿವನಾಗುತ್ತೇನೆ ಎಂದಿದ್ದರು.ಎಂಎಲ್​ಸಿ ನಸೀರ್​ ಅಹ್ಮದ್​ ಸಹ ಲಾಬಿ ನಡೆಸಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾದರು. ಎಂ.ಎಲ್​.ಸಿ.ಅನಿಲ್​ಕುಮಾರ್​ ಪ್ರಥಮ ಬಾರಿ ಎಂಎಲ್​ಸಿಯಾದ ಕಾರಣ ತಟಸ್ಥವಾಗಿದ್ದಾರೆ.

ಜಿಲ್ಲಾ ಕಾಂಗ್ರೆಸ್​ನಲ್ಲಿ 2 ಗುಂಪುಗಳಾಗಿರುವ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಕೆ.ಎಚ್​.ಮುನಿಯಪ್ಪ ಅವರಿಗೆ ಸಚಿವ ಸ್ಥಾನ ನೀಡಿದರೂ ಅವರಿಗೆ ಕೋಲಾರ ಉಸ್ತುವಾರಿ ವಹಿಸುವಂತೆ ಒಂದು ಗುಂಪು, ಕೃಷ್ಣೇಬೈರೇಗೌಡ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕೆಂದು ಮತ್ತೊಂದು ಗುಂಪು ಪಟ್ಟು ಹಿಡಿದವು. 2 ಗುಂಪುಗಳನ್ನು ಸಮಾಧಾನಪಡಿಸುವ ಸಲುವಾಗಿ ಹೈಕಮಾಂಡ್​ ಬೈರತಿ ಸುರೇಶ್​ ಅವರನ್ನು ನೇಮಕ ಮಾಡಿ ಎರಡೂವರೆ ವರ್ಷ ಪೂರೈಸಿದ ನಂತರ ಕೋಲಾರಕ್ಕೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿತ್ತು.

ಐವರಲ್ಲಿ ಯಾರು ಮಂತ್ರಿ?

ಎಸ್​.ಎನ್​.ನಾರಾಯಣಸ್ವಾಮಿ ಮತ್ತು ರೂಪಕಲಾ ಇಬ್ಬರೂ ಸಚಿವ ಸಂಪುಟ ದರ್ಜೆಯ ನಿಗಮ ಹುದ್ದೆಯಲ್ಲಿದ್ದು, ಕೋಲಾರ ಶಾಸಕ ಕೊತ್ತೂರು ಮಂಜುನಾಥ್​ ಯಾವುದೇ ನಿಗಮ ಸ್ಥಾನ ಪಡೆದಿಲ್ಲ. ಬುಡಗ ಜಂಗಮ ಜಾತಿಯಲ್ಲಿ ಏಕೈಕ ಶಾಸಕ ಆಗಿರುವುದರಿಂದ ಮಂತ್ರಿಸ್ಥಾನ ನೀಡುವುದಾದರೆ ನನಗೂ ನೀಡಲಿ ಎಂದು ಒತ್ತಾಯಪಡಿಸಿದ್ದರು. ಅಲ್ಪಸಂಖ್ಯಾತರ ಕೋಟಾದಲ್ಲಿ ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ನಸೀರ್​ ಅಹ್ಮದ್​ ಸಹ ಮುಂದೆ ಬಂದಿದ್ದಾರೆ. ಇತ್ತ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕೆ.ಎಂಎಫ್​ ಮೇಲೆ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನ ಕೊಡಲಿ ಅಥವಾ ಕೆ.ಎಂ.ಎಫ್​. ಅಧ್ಯಕ್ಷರ ಸ್ಥಾನ ನೀಡಲಿ ಎಂಬ ನಿರೀಕ್ಷೆಯಲ್ಲಿದ್ದಾರೆ. ಶಾಶ್ವತ ನೀರಾವರಿ ಯೋಜನೆಗಳಾದ ಎತ್ತಿನಹೊಳೆ ಮತ್ತು ಕೆ.ಸಿ.ವ್ಯಾಲಿ ನೀರು ಎಲ್ಲ ಕೆರೆಗಳಿಗೂ ಹರಿಸಿ 3ನೇ ಹಂತದ ಶುದ್ಧೀಕರಣ, ಕೋಲಾರದ ಎಪಿಎಂಸಿ ಮಾರುಕಟ್ಟೆ ವಿಸ್ತರಣೆ, ವರ್ತುಲ ರಸ್ತೆ ಸೇರಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವ ಉಸ್ತುವಾರಿಯನ್ನು ನೇಮಕ ಮಾಡಬೇಕು ಎಂಬುದು ಜನತೆಯ ಒತ್ತಾಯವಾಗಿದೆ.

ಈಡೇರುವುದೇ ಭರವಸೆ:

ಶಾಸಕ ನಾರಾಯಣಸ್ವಾಮಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಮುಂದಿನ ಬಾರಿ ನೋಡೋಣ ಎಂದು ಹೈಕಮಾಂಡ್​ ಭರವಸೆ ನೀಡಿದ್ದರಿಂದ ಹಾಗೂ ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಬಳಿ ಸಚಿವ ಸ್ಥಾನಕ್ಕಾಗಿ ಒತ್ತಾಯಪಡಿಸಿರುವುದರಿಂದ ಸಚಿವ ಸಂಪುಟ ವಿಸ್ತರಣೆಯಾದರೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ತಂದೆ ಇಳಿದರೆ ಮಗಳಿಗೆ ಪಟ್ಟ:

ಕಾಂಗ್ರೆಸ್​ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ನಂತರ ಕೆಲವು ಹಿರಿಯ ಸಚಿವರನ್ನು ಕೈಬಿಡಲಿದ್ದಾರೆ ಎಂಬ ಮಾತುಗಳು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಎಚ್​.ಮುನಿಯಪ್ಪ ಅವರನ್ನೂ ಕೈಬಿಡಲಿದ್ದಾರೆ. ಹೊಸಬರಿಗೆ ಅವಕಾಶ ನೀಡಬೇಕು ಎಂಬ ಮುನಿಯಪ್ಪ ಅವರ ಈ ಹಿಂದಿನ ಹೇಳಿಕೆ ಆಧರಿಸಿ ಮಹಿಳಾ ಕೋಟಾದಡಿ ಮಗಳು ರೂಪಕಲಾ ಅವರಿಗೆ ಸಚಿವ ಸ್ಥಾನ ದಕ್ಕಲಿದೆ ಎಂದು ಅಂದಾಜಿಸಲಾಗಿದೆ.

-ಎನ್​.ಮುನಿವೆಂಕಟೇಗೌಡ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net